ಚಾಮರಾಜನಗರ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸೆ.22 ರಿಂದ ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಲವಾರು ಗೊಂದಲಗಳಿಂದ ಕೂಡಿದ್ದು, ಇವುಗಳನ್ನು ಸರಿಪಡಿಸುವವರಗೆ ರಾಜ್ಯ ಸರ್ಕಾರ ಸಮೀಕ್ಷೆಯನ್ನು ಮುಂದೂಡಬೇಕು ಎಂದು ಜಿಲ್ಲಾಭಿವೃದ್ದಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಒತ್ತಾಯಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದ 7 ಕೋಟಿ ಜನಸಂಖ್ಯೆಯಲ್ಲಿ 2 ಕೋಟಿ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಮನೆ ಮನೆ ಗಣತಿ ನಡೆಸಲು 1.75 ಲಕ್ಷ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಇವರಿಗೆ ತಲಾ 20 ಸಾವಿರ ರೂ. ನಿಗದಿ ಮಾಡಲಾಗಿದ್ದು, ಸಮೀಕ್ಷೆಗಾಗಿ 320 ಕೋಟಿ ರೂ. ವೆಚ್ಚವಾಗಲಿದೆ ಎಂದು ಮುಖ್ಯಮಂತ್ರಿಯವರೇ ಹೇಳಿದ್ದಾರೆ. ಆದರೆ ಸಮೀಕ್ಷೆ ನಡೆಸುವ ಶಿಕ್ಷಕರಿಗೆ ಸೂಕ್ತ ತರಬೇತಿ ಜಿಲ್ಲಾಡಳಿತದಿಂದ ನೀಡಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಮೀಕ್ಷಾ ಪಟ್ಟಿಯಲ್ಲಿ 60 ಪ್ರಶ್ನೆಗಳಿಗೆ ಉತ್ತರ ಪಡೆದು ಆ್ಯಪ್‌ನಲ್ಲಿ ನಮೂದಿಸಬೇಕು. ಅವುಗಳನ್ನು ಆ್ಯಪ್‌ನಲ್ಲಿ ನಮೂದಿಸಲು ಕೆಲಕಡೆ ನೆಟ್ ವರ್ಕ್ ಸಮಸ್ಯೆ ಇದೆ. ಆ್ಯಪ್‌ನಲ್ಲಿ 1423 ಜಾತಿಗಳ ಜತೆ 148 ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆ. 1561 ಜಾತಿಗಳನ್ನು ಆ್ಯಪ್‌ನಲ್ಲಿ ಡೌನ್ ಲೋಡ್ ಮಾಡಲಾಗಿದೆ. ನಂತರ ಗೊಂದಲ ಸೃಷ್ಟಿಯಾಗಿ 33 ಜಾತಿಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಸಮೀಕ್ಷೆಯ ಮಾಹಿತಿ ಒಳಗೊಂಡ ಮಾಹಿತಿ ಕೈಪಿಡಿಯನ್ನು ಸರಿಯಾಗಿ ಪರಿಶೀಲಿಸದೇ 75 ಸಾವಿರ ಪ್ರತಿಗಳನ್ನು ಆತುರದಲ್ಲಿ ಮುದ್ರಣ ಮಾಡಲಾಗಿದೆ ಎಂದರು.
ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯಲು ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಸಮೀಕ್ಷಾ ಪಟ್ಟಿಯಲ್ಲಿ ವೈಜ್ಞಾನಿಕವಾಗಿ ಅಳವಡಿಸಬೇಕು. ಎಲ್ಲ ಗೊಂದಲಗಳ ಸರಿಪಡಿಸಿಕೊಳ್ಳಲು ಎರಡು ತಿಂಗಳ ಸಮಯಾವಕಾಶ ಬೇಕು, ಅಲ್ಲಿಯವರೆಗೆ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಪುಟ್ಟಸ್ವಾಮಿ, ಸಿದ್ದರಾಜು , ರಾಜಶೇಖರ್ ಹಾಜರಿದ್ದರು.