ಜಿಲ್ಲೆ

ಸಮೀಕ್ಷೆ ಕಾರ್ಯದಿಂದ ಬಿಡುಗಡೆಗೊಳಿಸಿ

ಶಹಾಪುರ : ಚುನಾವಣಾ ಆಯೋಗ ಅಂಗನವಾಡಿ ಕರ‍್ಯಕರ್ತೆಯರನ್ನು ಮನೆ ಮನೆ ಸಮೀಕ್ಷೆಗೆ ನಿಯೋಜಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯುವAತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಬುಧವಾರ ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ನೇತೃತ್ವ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ ಮಾತನಾಡಿ, ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಂಗನವಾಡಿ ನೌಕರರನ್ನು ಹಲವು ಸರ್ವೇ ಕಾರ್ಯಗಳಿಗೆ ನಿಯೋಜಿಸಿವೆ. ಅಲ್ಲದೆ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ, ಪೋಷಣೆ ಜತೆಗೆ ಗರ್ಭಿಣಿಯರ ಆರೋಗ್ಯದ ಜಿಮ್ಮೇದಾರಿಯೂ ನಮ್ಮ ಮೇಲಿದೆ. ಇಷ್ಟೆಲ್ಲ ಕೆಲಸದ ಮಧ್ಯೆ ಇದೀಗ ಚುನಾವಣಾ ಆಯೋಗ ಮನೆ ಮನೆ ಸಮೀಕ್ಷೆ ಮಾಡಿ ಎಂದು ಆದೇಶಿಸಿದೆ ಎಂದು ಅಳಲು ತೋಡಿಕೊಂಡರು.

ನಿತ್ಯ ಹತ್ತಾರು ಕೆಲಸಗಳಿಂದ ಒತ್ತಡದಲ್ಲಿರುವ ನಮಗೆ ಇದೀಗ ಹೊಸ ಸಮೀಕ್ಷೆಗೆ ನಿಯೋಜಿಸಿದ್ದು ಸರಿಯಲ್ಲ. ಮೊಬೈಲ್‌ನಲ್ಲಿ ಸಮೀಕ್ಷೆ ವರದಿ ಅಪ್‌ಲೋಡ್ ಮಾಡಬೇಕಿದ್ದರಿಂದ ತೋಚದಂತಾಗಿದೆ. ಕೆಲವರು ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಓದಿದ್ದರಿಂದ ಈ ಸಮೀಕ್ಷೆ ಬಗ್ಗೆ ಮಾಹಿತಿ ಗೊತ್ತಿಲ್ಲ ಎಂದು ಹೇಳಿದರು.

ಕುಟುಂಬದ ಪೂರ್ಣ ಮಾಹಿತಿ ಮೊಬೈಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ೧೦೦-೧೫೦ ಕಾಲಂಗಳು ಇದ್ದುದರಿಂದ ತುಂಬ ಕಷ್ಟವಾಗುತ್ತಿದೆ. ಸರ್ಕಾರ ನಾಲ್ಕು ವರ್ಷದ ಹಿಂದೆ ಮೊಬೈಲ್ ಕೊಟ್ಟಿದ್ದು, ಬಹುತೇಕ ಹಾಳಾಗಿವೆ. ಕೂಡಲೇ ಸರ್ಕಾರ ಈ ಸರ್ವೇ ಕಾರ್ಯದಿಂದ ಮುಕ್ತಿ ಕೊಡಿಸಬೇಕೆಂದು ಒತ್ತಾಯಿಸಿದರು.

ಪ್ರಮುಖರಾದ ಮಹಾನಂದ ಸಗರ, ಇಂದಿರಾದೇವಿ ಕೊಂಕಲ್, ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಯಮನಮ್ಮ ದೋರನಹಳ್ಳಿ, ಗುರುಬಾಯಿ, ಭಾಗಮ್ಮ, ನಿರ್ಮಲಾ, ಭೀಮಬಾಯಿ, ಭಾರತಿ ಇತರರಿದ್ದರು.