ಜಿಲ್ಲೆ

ಸಮೀಕ್ಷೆ ಉದ್ಘಾಟನೆಗೆ ನೆಟ್‌ವರ್ಕ್ ಸಮಸ್ಯೆ

ಬೆಳಗಾವಿ: ಸೋಮವಾರದಿಂದ ಆರಂಭಗೊಂಡಿರುವ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮೊದಲ ದಿನವೇ ನೆಟ್‌ವರ್ಕ್ ಸಮಸ್ಯೆ ಎದುರಾಗಿದೆ. ಜಿಲ್ಲಾಮಟ್ಟದಲ್ಲಿ ಗಣತಿಗೆ ಚಾಲನೆ ನೀಡಲು ಗುರುತಿಸಿದ್ದ ಮನೆಯಲ್ಲಿ ನೆಟ್‌ವರ್ಕ್ ಬಾರದ್ದ ಕಾರಣ ನೆಟ್‌ವರ್ಕ್ ಲಭ್ಯವಿರುವ ಮನೆ ಹುಡುಕಿ ಮಧ್ಯಾಹ್ನದ ಹೊತ್ತಿಗೆ ಸಮೀಕ್ಷೆಗೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ನಗರದ ಕ್ಯಾಂಪ್ ಪ್ರದೇಶದ ಮಾರ್ಕೆಟ್ ಸ್ಟ್ರೀಟ್‌ನಲ್ಲಿ ಅಬ್ದುಲ್ ಗಫಾರ್ ಶೇಖ್ ಎಂಬುವವರ ಮನೆಯನ್ನು ಮುಂಚಿತವಾಗಿಯೇ ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳು ಗುರುತಿಸಿಟ್ಟಿದ್ದರು. ಬೆಳಗ್ಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ ಜೈನ್ ನೇತೃತ್ವದ ತಂಡ ಆಗಮಿಸಿತ್ತು. ಆದರೆ ನೆಟ್‌ವರ್ಕ್ ಸಿಗದ ಕಾರಣಕ್ಕೆ ಮೊದಲ ಮನೆಯಲ್ಲಿಯೇ ಸಮೀಕ್ಷೆ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ರಾಮನಗರದಲ್ಲಿ ನೆಟವರ್ಕ್ ಇರುವ ಮನೆ ಹುಡುಕುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ರಾಮನಗರದ ಮಲ್ಲವ್ವ ದುರ್ಗಪ್ಪ ಗಾಡಿವಡ್ಡರ ಎಂಬುವವರ ಮನೆಗೆ ಆಗಮಿಸಿದ ಶಾಸಕ ಆಸೀಫ್ ಸೇಟ್ ಮತ್ತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸಮೀಕ್ಷೆಗೆ ಸಾಂಕೇತಿಕ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 12 ಲಕ್ಷ ಮನೆಗಳನ್ನು ಸಮೀಕ್ಷೆಗೆ ಗುರುತಿಸಲಾಗಿದ್ದು, ಒಟ್ಟು 10,803 ಗಣತಿದಾರರನ್ನು ನೇಮಿಸಲಾಗಿದೆ. ನಮ್ಮನ್ನು ಸಮೀಕ್ಷೆಯಲ್ಲಿ ಒಳಗೊಂಡಿಲ್ಲ ಎಂದು ಎಂದು ಆರೋಪಿಸಿ ಖಾನಾಪುರ ತಾಲೂಕಿನ ಕಾಡಂಚಿನಲ್ಲಿರುವ ಹಕ್ಕಿಪಿಕ್ಕಿ ಜನಾಂಗದವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಮೀಕ್ಷೆಗೆ ಒಳಪಡಿಸಲು ಖಾನಾಪುರ ತಹಸೀಲ್ದಾರ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನೆಟ್‌ವರ್ಕ್ ಸಮಸ್ಯೆ ಇರುವ ಮನೆಗಳನ್ನು ಶಿಬಿರಗಳ ಮೂಲಕ ಸಮೀಕ್ಷೆಗೆ ಒಳಪಡಿಸುತ್ತೇವೆ. ಈಗಾಗಲೇ ಅಂತಹ 32 ಸ್ಥಳಗಳನ್ನು ಗುರುತಿಸಿದ್ದು, ಅಲ್ಲಿ ಶೀಘ್ರವೇ ಕ್ಯಾಂಪ್ ಮಾಡುತ್ತೇವೆ ಎಂದು ತಿಳಿಸಿದರು.