ಬಳ್ಳಾರಿ : ರಾಜ್ಯ ಸರ್ಕಾರದಿಂದ ವಿವಿಧ ನೇಮಕಾತಿ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಿಸಿ ಎಂದು ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ ಒತ್ತಾಯಿಸಿದರು.
ನಗರದ ಶ್ರೀ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಧಾನಸಭಾ, ಜಿಲ್ಲಾವಾರು ಹಾಗೂ ರಾಜ್ಯವಾರು ವಿಂಗಡಿಸಿ ಸಾಮಾಜಿಕ ನ್ಯಾಯ ಪದ್ಧತಿಯಂತೆ ಸದಸ್ಯರನ್ನು ಆಯ್ಕೆ ಮಾಡಿ ನೇಮಿಸಿಬೇಕು. ಅಲ್ಲದೆ, ಪ್ರತಿಯೊಬ್ಬರಿಗೆ ಗುರುತಿನ ಚೀಟಿ ನೀಡಿ, ಸ್ಥಾನದ ಜವಾಬ್ದಾರಿ ವಹಿಸಬೇಕು. ಈಗಾಗಲೇ ಇದರ ಬಗ್ಗೆ ರಾಜ್ಯದ ಎಲ್ಲ 224 ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರಿಗೆ ಪತ್ರ ಬರೆಯಲಾಗಿದೆ. ಸಿಎಂ ಹಾಗೂ ಡಿಸಿಎಂಗೂ ಇದರ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದರು. ರಾಜ್ಯ ಸರ್ಕಾರ ನಿಗಮ ಮಂಡಳಿಗಳಲ್ಲಿ ಸದಸ್ಯರನ್ನು ನೇಮಿಸುವಾಗ ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು ಮತ್ತು ಇತರೆ ಹೀಗೆ ಐದು ವರ್ಗಗಳಿಗೂ ಪ್ರಾತಿನಿಧ್ಯ ನೀಡಬೇಕು. ಜತೆಗೆ ಅದರಲ್ಲಿ ಒಬ್ಬ ಮಹಿಳೆ, ವಕೀಲ ಮತ್ತು ಪದವೀರ ಇರುವಂತೆ ನಿಗಾವಹಿಸಬೇಕು. ನೇಮಕಾತಿ ಪ್ರಕಟಿಸುವಾಗ ಬರೀ ಹಾಳೆಯ ಮೇಲೆ ನೇಮಕಾತಿ ಘೋಷಿಸದೆ, ರಾಜ್ಯಾದ್ಯಂತ ಏಕ ರೂಪದ ಐಡಿ ಕಾರ್ಡ್‌ಗಳನ್ನು ನೀಡಬೇಕು ಎಂದು ತಿಳಿಸಿದರು.
2016-17 ಸಾಲಿನಲ್ಲಿ ಕರ್ನಾಟಕ ಪ್ರದೇಶ ದೇವರಾಜ ಅರಸು ವೇದಿಕೆಯಿಂದ ರಾಜ್ಯದ ಹಿಂದುಳಿದ ವರ್ಗಗಳ ಬಹು ನಿರೀಕ್ಷೆ ಮತ್ತ ಭರವಸೆಯೊಂದಿಗೆ ಜಿಲ್ಲಾ ಕೇಂದ್ರದಲ್ಲಿ ಸಾಮಾಜಿಕ ಸಮುಚ್ಚಯ ಕೇಂದ್ರವನ್ನು ಮಾದರಿಯಾಗಿ ಸ್ಥಾಪನೆ ಮಾಡಬೇಕು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಹಿಂದ ವರ್ಗಗಳ ಸಾಮಾಜಿಕ ಸಮುಚ್ಚಯ ನಿರ್ಮಾಣಕ್ಕೆ ಎರಡೂವರೆ ಎಕರೆ ನಿವೇಶನ ನೀಡಬೇಕು ಎಂದು ಮನವಿ ಮಾಡಿದರು. ಪ್ರಮುಖರಾದ ಶಮೀನಾ, ಡಿ. ವೆಂಕಟ ರಾಮಣ್ಣ ಇದ್ದರು.