ಜಿಲ್ಲೆ

ಸಮಿತಿ ವರದಿ ಕೊಟ್ಟ ಬಳಿಕ ಒಪಿಎಸ್ ಬಗ್ಗೆ ನಿರ್ಧಾರ: ಸಿದ್ದರಾಮಯ್ಯ

ಮೈಸೂರು: ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿ ಮಾಡಲಾಗುವುದು. ಜತೆಗೆ ಹಳೇ ಪಿಂಚಣಿ ವ್ಯವಸ್ಥೆ(ಒಪಿಎಸ್) ಜಾರಿ ಕುರಿತಾಗಿ ಸಮಿತಿ ವರದಿ ಕೊಟ್ಟ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘ ವತಿಯಿಂದ ಮುಕ್ತ ಗಂಗೋತ್ರಿ ಘಟಿಕೋತ್ಸವ ಭವನದಲ್ಲಿ  ಆಯೋಜಿಸಿದ್ದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯ ಸಂಜೀವಿನಿ ಬಗ್ಗೆಯೂ ಸೂಕ್ತ ತೀರ್ಮಾನ ಆಗಿದೆ ಎಂದು ತಿಳಿಸಿದರು.

ಸರ್ಕಾರದ ಕೆಲಸ ಜನರಿಗೆ ತಲುಪಿಸುವ ಕೆಲಸವನ್ನು ಸರ್ಕಾರಿ ನೌಕರರು ಮಾಡಿ. ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಸಿದ್ಧ ಇದೆ. ನಿಮ್ಮ ಬೇಡಿಕೆಗಳ ಈಡೇರಿಕೆಗೆ ಸದಾ ತೆರೆದ ಮನಸ್ಸಿನಿಂದ ಇರುತ್ತೇನೆ. ಹಾಗೆಯೇ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮತ್ತು ಈ ಜವಾಬ್ದಾರಿ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿ ಎಂದು ಹೇಳಿದರು.

ಪ್ರತಿಭೆ ಯಾರ ಸ್ವತ್ತಲ್ಲ. ಅವಕಾಶ ಸಿಕ್ಕರೆ ಪ್ರತಿಭೆ ಹೊರಗೆ ಬರುತ್ತದೆ ಎಂದು ಹೇಳಿದರು. ಮಕ್ಕಳ ಪ್ರತಿಭೆ ರೂಪುಗೊಳ್ಳಲು ಶಿಕ್ಷಕರಷ್ಟೇ ಪಾಲಕರ ಶ್ರಮ ಕೂಡ ಅಗತ್ಯ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳದಿದ್ದರೆ ಯಾರನ್ನೂ ದೂರಲು ಸಾಧ್ಯವಿಲ್ಲ ಎಂದರು.

ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು. ಅದು ನಿಮ್ಮ ವೃತ್ತಿಗೆ ಮಾಡುವ ಅವಮಾನ. ನಮ್ಮ ಮೇಲೆ, ಸರ್ಕಾರಿ ನೌಕರರ ಮೇಲೆ ಸಮಾಜದ ಋಣ ಇದೆ ಎಂದು ಹೇಳಿದರು.

ನಮಗೆ ವಿಶ್ವ ಮಾನವರಾಗುವ ಅವಕಾಶ ಇದೆ. ಅಲ್ಪ ಮಾನವರಾಗುವುದು ಬೇಡ. ಹುಟ್ಟು ಆಕಸ್ಮಿಕ. ಸಾವು ನಿಶ್ಚಿತ. ಆದ್ದರಿಂದ ನಾವು ಸಮಾಜದ ಋಣ ತೀರಿಸಿ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಶಿಕ್ಷಕರು, ಸೈನಿಕರು, ರೈತರು ನಮ್ಮ ಬದುಕನ್ನು ಹಸನು ಮಾಡಿದ್ದಾರೆ. ಈ ಮೂವರ ಋಣ ತೀರಿಸುವ ಕೆಲಸ ನಾವು ಮಾಡಬೇಕಿದೆ ಎಂದರು. ಮಕ್ಕಳಲ್ಲೂ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಮೂಡಿಸುವ ಮೂಲಕ ಸಮಾಜಮುಖಿ ಪ್ರಜೆಗಳನ್ನು ರೂಪಿಸಬೇಕು ಎಂದು ತಿಳಿಸಿದರು.

ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕ ರವಿಶಂಕರ್, ಕರಾಮುವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಸಂಘದ ಅಧ್ಯಕ್ಷ ಷಡಾಕ್ಷರಿ, ಪ್ರಧಾನ ಕಾರ್ಯದರ್ಶಿ ಗಿರೀಗೌಡ, ಗೌರವಾಧ್ಯಕ್ಷ ಬಸವರಾಜು, ಕಾರ್ಯಾಧ್ಯಕ್ಷ ಬಸವರಾಜು ಬಳ್ಳಾರಿ, ರಾಜ್ಯ ಉಪಾಧ್ಯಕ್ಷ ಗೋವಿಂದರಾಜು, ಜಿಲ್ಲಾಧ್ಯಕ್ಷ ಅರುಣಕುಮಾರ್ ಇನ್ನಿತರರಿದ್ದರು.