ಜಿಲ್ಲೆ

ಸಮಿತಿ ರಚಿಸಲು ನಿರ್ಣಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಾನಗರ ಪಾಲಿಕೆ ವ್ಯಾಪ್ತಿಗೆ ಭಾಗಶಃ ಕಂದಾಯ ಗ್ರಾಮಗಳನ್ನು ಸೇರಿಸುವ ನಿಟ್ಟಿನಲ್ಲಿ ಸಮಿತಿ ರಚಿಸಿ, ಗ್ರಾಮಗಳ ಸಮಗ್ರ ಮಾಹಿತಿ ಕ್ರೋಢಿಕರಿಸಿ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಬಳಿಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಲಾಗಿದೆ.
ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಭಾಗಶಃ ಕಂದಾಯ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಲು ಚರ್ಚಿಸುವ ನಿಟ್ಟಿನಲ್ಲಿ ನಗರದ ಸ್ವಾತಂತ್ರೃ ಅಮೃತ ಮಹೋತ್ಸವ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸರ್ವ ಸದಸ್ಯರ ಸಲಹೆ-ಸೂಚನೆಗಳನ್ನು ಆಲಿಸಿದ ಮೇಯರ್ ಈರೇಶ ಅಂಚಟಗೇರಿ, ಸಭಾ ನಾಯಕರು, ವಿಪಕ್ಷ ನಾಯಕರು, ಹಿರಿಯ ಸದಸ್ಯರ ಸಮಿತಿ ರಚಿಸಿ ಗ್ರಾಮಗಳ ಸಮಗ್ರ ಮಾಹಿತಿ ಕಲೆ ಹಾಕಿ ವರದಿ ಸಿದ್ಧಪಡಿಸಬೇಕು. ಆಯಾ ವ್ಯಾಪ್ತಿ ಸದಸ್ಯರೊಂದಿಗೆ ಚರ್ಚಿಸಿ ಸಾರ್ವಜನಿಕರ ಅಹವಾಲು ಸಹ ಸ್ವೀಕರಿಸಬೇಕು. ಬಳಿಕ ಅಂತಿಮ ವರದಿ ಸಿದ್ಧಪಡಿಸಿ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ನಿರ್ಣಯಿಸಲಾಯಿತು.
ಇದಲ್ಲದೆ ಈಗಾಗಲೇ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದ ಗ್ರಾಮಗಳಲ್ಲಿನ ಗಾಂವಠಾಣ ಜಮೀನುಗಳನ್ನು ಪಾಲಿಕೆ ಸುಪರ್ದಿಗೆ ಪಡೆಯಲು ಡಿಸಿಗೆ ಪತ್ರ ಬರೆದು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂವಹನ ನಡೆಸಿ ಪಾಲಿಕೆ ಹೆಸರಿಗೆ ನೋಂದಾಯಿಸಬೇಕು. ಪಾಲಿಕೆ ವ್ಯಾಪ್ತಿಗೆ ಬರದ ಅನೇಕ ಲೇಔಟ್‌ಗಳಿಗೆ ಎನ್‌ಓಸಿ ನೀಡಲಾಗಿದೆ. ಅಂತಹ ಲೇಔಟ್‌ಗಳಿಗೆ ಸಿಸಿ ನೀಡಿ ಪಾಲಿಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಸಬೇಕು ಎಂದು ಆದೇಶಿಸಿದರು.
ಹಿರಿಯ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಭಾಗಶಃ ಕಂದಾಯ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಲು ಯೋಚನೆ ಮಾಡಿರುವುದು ಉತ್ತಮ ನಿರ್ಣಯ. ಆದರೆ ಈ ಬಗ್ಗೆ ಅಧಿಕಾರಿಗಳಿಗೆ ಸದಸ್ಯರಿಗೆ ಸರಿಯಾದ ಮಾಹಿತಿ ನೀಡಬೇಕು. 1995ರಲ್ಲಿ ಡಿಲಿಮಿಟೇಶನ್ ಆದಾಗ ಸೇರಿದ ಗ್ರಾಮಗಳು, ಸರ್ವೇ ನಂ ಹಾಗೂ ಹೊರಗುಳಿದ ಗ್ರಾಮಗಳ ಮಾಹಿತಿ ನೀಡಬೇಕು. ಗ್ರಾಮಗಳ ಸೇರ್ಪಡೆಯಿಂದ ಪಾಲಿಕೆಗೆ ಆದಾಯ ಎಷ್ಟು? ಅಭಿವೃದ್ಧಿಗೆ ಖರ್ಚೆಷ್ಟು? ಎಂಬ ಸಮಗ್ರ ಮಾಹಿತಿ ಸಹ ಬೇಕು. ಒಂದು ತಿಂಗಳು ಅವಕಾಶ ನೀಡಿದ್ದರೂ ಸರಿಯಾದ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭಾನಾಯಕ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಮಹಾನಗರ ಪಾಲಿಕೆಯ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ನಿರ್ಣಯಿಸಿದ್ದು ಉತ್ತಮ. ವ್ಯಾಪ್ತಿ ಹೆಚ್ಚಿದ ಬಳಿಕ ಎದುರಾಗುವ ತಾಂತ್ರಿಕ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಚರ್ಚೆ ಆಗಬೇಕು. ಪ್ರತಿ ಗ್ರಾಮಗಳ ಸರ್ವೇ ನಡೆಸಿ ಎಷ್ಟು ಪ್ರಮಾಣದಲ್ಲಿ ವ್ಯಾಪ್ತಿ ಹೆಚ್ಚಲಿದೆ ಎಂದು ಅರಿತುಕೊಳ್ಳಬೇಕಲ್ಲದೆ, ಮುಂದಿನ ದಿನಗಳಲ್ಲಿ ಅವುಗಳ ಅಭಿವೃದ್ಧಿ ಹೇಗೆ ಎಂಬುದನ್ನು ಚಿಂತಿಸಬೇಕು. ಹೀಗಾಗಿ ಹಿರಿಯ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿ, ಪ್ರತಿ ಗ್ರಾಮಗಳ ಸರ್ವೇ ನಡೆಸಿ ಆಯಾ ವ್ಯಾಪ್ತಿಯ ಸದಸ್ಯರೊಂದಿಗೆ ಚರ್ಚಿಸಿ ಅವರಿಗೂ ತಿಳಿವಳಿಕೆ ನೀಡಿ ಸಮಗ್ರ ರೂಪುರೇಷೆ ಸಿದ್ಧಪಡಿಸಬೇಕು. ಯಾವುದೇ ಗೊಂದಲ ಇಲ್ಲದಂತಾದ ಬಳಿಕ ಸಾಮಾನ್ಯ ಸಭೆಯಲ್ಲಿ ವಿಷಯ ಮರು ಮಂಡನೆ ಮಾಡಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಬೇಕು ಎಂದರು.
ಸದಸ್ಯರಾದ ಸದಸ್ಯ ಶಿವು ಹಿರೇಮಠ, ಶಂಭುಗೌಡ ಸಾಲಮನಿ, ಇಮ್ರಾನ್ ಎಲಿಗಾರ, ಉಮೇಶಗೌಡ ಕೌಜಗೇರಿ, ಡಾ. ಮಯೂರ ಮೋರೆ, ರಾಜಣ್ಣ ಕೊರವಿ, ನಿರಂಜನಯ್ಯ ಹಿರೇಮಠ, ಸುವರ್ಣ ಕಲ್ಲಕುಂಟ್ಲ, ಕವಿತಾ ಕಬ್ಬೇರ, ಇತರರು ಮಾತನಾಡಿದರು.
ಉಮಮೇಯರ್ ಉಮಾ ಮುಕುಂದ, ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ, ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ, ತಹಸೀಲ್ದಾರರಾದ ಸಂತೋಷ ಹಿರೇಮಠ, ಶಶಿಧರ ಮಾಡ್ಯಾಳ, ಪಾಲಿಕೆ ಅಧಿಕಾರಿಗಳು, ಇತರರು ಇದ್ದರು.
-----ಬಾಕ್ಸ್------
ಮಾಹಿತಿ ಇಲ್ಲದ್ದಕ್ಕೆ ಗದ್ದಲ
ಕಂದಾಯ ಗ್ರಾಮಗಳ ಸೇರ್ಪಡೆ ಕುರಿತು ಸದಸ್ಯರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಸಭೆ ಗೊಂದಲದ ಗೂಡಾಗಿತ್ತು. ಸೇರ್ಪಡೆ ಮಾಡಿಕೊಳ್ಳಬೇಕಾದ ಗ್ರಾಮಗಳ ಮಾಹಿತಿಯನ್ನು ಸದಸ್ಯರಿಗೆ ಸರಿಯಾಗಿ ನೀಡಿಲ್ಲ. ಹೀಗಾಗಿ ಚರ್ಚೆ ನಡೆಸುವುದು ಕಷ್ಟ ಎಂಬುದು ವಿಪಕ್ಷ ಸದಸ್ಯರ ಜತೆಗೆ ಆಡಳಿತ ಪಕ್ಷದ ಕೆಲ ಸದಸ್ಯರ ಆರೋಪ. ಸದಸ್ಯರಾದ ಸುವರ್ಣ ಕಲ್ಲಕುಂಟ್ಲ ಹಾಗೂ ಮಹಮದ್ ಇಕ್ಬಾಲ್ ನವಲೂರ ಸದನದ ಬಾವಿಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದರು. ಆಗ ಸದಸ್ಯರಿಗೆ ಮೇಯರ್ ಎಚ್ಚರಿಕೆ ನೀಡಿ, ಆಸನದಲ್ಲೇ ಕುಳಿತು ಸಲಹೆ ಸೂಚನೆ ನೀಡಿ ಎಂದು ಎಚ್ಚರಿಕೆ ನೀಡಿದರು.