ಬಾಗಲಕೋಟೆ: 12ನೇ ಶತಮಾನದಲ್ಲಿ ಮೇಲು-ಕೀಳು ಭೇದಭಾವ ಹಾಗೂ ಜಾತಿಯ ಅಡೆತಡೆಗಳನ್ನು ತೊಡೆದು ಹಾಕಿ, ಎಲ್ಲರೂ ಸಮಾನರು ಎಂಬ ತತ್ತ್ವದ ಹೋರಾಟ ನಡೆಸಿದ ಶಿವಶರಣರಲ್ಲಿ ನುಲಿಯ ಚಂದಯ್ಯನವರು, ಮಾನವ ಅಂತಃಕರಣದ ಪೂರ್ಣತೆಯಿಂದ ಕೂಡಿದವರಾಗಿದ್ದರು ಎಂದು ವಿಧಾನಪರಿಷತ್ ಸದಸ್ಯ ಪಿ.ಎಚ್. ಪೂಜಾರ್ ಹೇಳಿದರು.
ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಸವಣ್ಣವರು 12ನೇ ಶತಮಾನದಲ್ಲಿ ಎಲ್ಲಾ ಸಮುದಾಯಗಳ ಅಂತಃಕರಣ ಹೊಂದಿದವರನ್ನು ಗುರುತಿಸಿ ಅನುಭವ ಮಂಟಪವನ್ನು ನಿರ್ಮಿಸಿದರು. ಆ ಕಾಲದಲ್ಲೇ ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದರು. ಶಿವಶರಣರ ತತ್ತ್ವವು ಯಾವಾಗಲೂ ಮಾನವೀಯತೆ, ಮನುಷ್ಯ ಜಾತಿ ಒಂದೇ ಎಂಬುದು, ಎಲ್ಲರ ಏಳಿಗೆಗಾಗಿ ದುಡಿಯುವ ಮನೋಭಾವ ಹೊಂದಿರುವುದಾಗಿದೆ, ಹಾಗೂ ಜಗತ್ತಿನ ಅನೇಕ ಭಾಗಗಳಲ್ಲಿ ಬಸವಣ್ಣವರ ಮೂರ್ತಿಸ್ಥಾಪನೆ ಮಾಡಿ, ಎಲ್ಲರೂ ಕಾಯಕನಿಷ್ಠೆಯನ್ನು ಪಾಲಿಸುತ್ತಿರುವ ಎಂದು ಹೇಳಿದರು.
ಬದಾಮಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಚಂದ್ರಶೇಖರ ಹೆಗಡೆ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ, 12ನೇ ಶತಮಾನದಲ್ಲಿ ಶಿವಶರಣರು ಹೋರಾಡಿದ ವಿಷಯಗಳು ಹಾಗೂ ಇಂದಿನ ದಿನಮಾನದಲ್ಲಿ ನುಲಿಯ ಚಂದಯ್ಯರ ವಚನಗಳ ಮಹತ್ವದ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಭಜಂತ್ರಿ, ಗೌರವಾಧ್ಯಕ್ಷ ಮೋಹನ್ ದಾಸ್ ಕಟ್ಟಿಮನಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ್ ಭಜಂತ್ರಿ ಸೇರಿದಂತೆ ಸಮಾಜದ ಅನೇಕ ಗಣ್ಯ ಮಾನ್ಯರು ಇದ್ದರು.