ಚಿಕ್ಕಬಳ್ಳಾಪುರ: ಪ್ರತಿಯೊಬ್ಬರು ಕನಕದಾಸರ ಆದರ್ಶ ತತ್ವಗಳನ್ನು ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಸಲಹೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುರುಬರ ಸಹಕಾರ ಸಂಘ ಗುರುವಾರ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಕನಕದಾಸರ ಜಯಂತಿಯಲ್ಲಿ ಮಾತನಾಡಿ, ಮಹನೀಯರ ಜಯಂತಿ ಆಚರಣೆಯ ಉದ್ದೇಶ ಯುವ ಜನತೆಗೆ ಒಳ್ಳೆಯ ಸಂದೇಶವನ್ನು ನೀಡುವುದಾಗಿದೆ. ಇದು ಒಂದು ಕೋಮಿಗೆ ಸೀಮಿತವಾಗಬಾರದು. ಪ್ರತಿಯೊಬ್ಬರು ಭಾಗವಹಿಸಬೇಕು ಎಂದರು.
ಉಪನ್ಯಾಸ ನೀಡಿದ ಚಿಂತಾಮಣಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ ರಘು, ಉತ್ತಮ ಸಮಾಜ ನಿರ್ಮಾಣಕ್ಕೆ ದಾಸರ ಆದರ್ಶಗಳ ಪಾಲನೆ ಅಗತ್ಯ. ಈ ಮಹತ್ವವನ್ನು ಅರಿತುಕೊಂಡು ಸಮಾಜದ ಒಳಿತಿಗಾಗಿ ಯುವಜನತೆ ದೃಢ ಸಂಕಲ್ಪದಿಂದ ಕಾರ್ಯನಿರ್ವಹಿಸಬೇಕು ಎಂದರು.
ಕುಲ ಕುಲವೆಂದು ಹೊಡೆದಾಡದಿರಿ, ಕುಲದ ನೆಲೆಯನೇನಾದರೂ ಬಲ್ಲಿರಾ ಎಂಬ ಕನಕದಾಸರ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ. ಇದು ಸಮಾನತೆಯ ಅರಿವು ಮೂಡಿಸುತ್ತದೆ. ನಾನು ಎಂಬದನ್ನು ಬಿಟ್ಟು ನಾವು ಎಂಬ ನಡೆಯು ಮುಂದಿನ ದಾರಿಯನ್ನು ಹಿರಿದಾಗಿಸುತ್ತದೆ ಎಂದರು.
ಇತ್ತೀಚೆಗೆ ಯುವಜನತೆ ಸ್ಮಾರ್ಟ್‌ಫೋನ್‌ನಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇತಿಹಾಸವನ್ನು ತಿಳಿದುಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಇವರನ್ನು ಎಚ್ಚರಿಸುವ ಕೆಲಸವಾಗಬೇಕು. ಬಾಲ್ಯದಿಂದಲೇ ಮಹನೀಯರ ಜೀವನಗಾಥೆ ಹೇಳುವ ಮೂಲಕ ಸಮಾಜದ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕೆಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಚುನಾವಣಾ ನೀತಿ ಸಂಹಿತೆ ಜಾರಿ ಹಾಗೂ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರಳವಾಗಿ ಜಯಂತಿ ಆಚರಿಸಲಾಯಿತು. ಜಿಪಂ ಸಿಇಒ ಪಿ ಶಿವಶಂಕರ್, ಅಪರ ಜಿಲ್ಲಾಧಿಕಾರಿ ಅಮರೇಶ್, ಜಿಪಂ ಉಪಕಾರ್ಯದರ್ಶಿ ನೋಮೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ತಹಸೀಲ್ದಾರ್ ನಾಗಪ್ರಶಾಂತ್ ಮತ್ತಿತರರು ಇದ್ದರು.