ಮೈಸೂರು: ದಲಿತರು ಸಮಾನತೆಗಾಗಿ ಇನ್ನೆಷ್ಟು ಕಾಯಬೇಕು ಎಂದು ಸಾಹಿತಿ, ವಿಮರ್ಶಕ ಒ.ಎಲ್. ನಾಗಭೂಷಣಸ್ವಾಮಿ ಪ್ರಶ್ನಿಸಿದರು.
ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಎಲ್. ಹನುಮಂತಯ್ಯ ಅವರ ಆಯ್ದ 101 ಕವಿತೆಗಳ ಸಂಕಲನ ‘ಅಂತರಾಳದ ಒಳದನಿಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಲಿತರೂ ಮನುಷ್ಯರೆಂದು ಗುರುತಿಸಲು ಎಲ್ಲಿಯವರೆಗೆ ಕಾಯಬೇಕು? ಈ ಕಾಯುವಿಕೆಗೆ ಸದ್ಯಕ್ಕೆ ಕೊನೆ ಇಲ್ಲ. ಜಾತಿಯ ಕಾರಣಕ್ಕೆ ಲಕ್ಷಾಂತರ ಜನರು ನರಳಾಡುತ್ತಿದ್ದಾರೆ. ಆದರೆ ಬಹಳಷ್ಟು ಜನರ ಕಣ್ಣಿಗೆ ಇದು ಕಾಣುತ್ತಿಲ್ಲ, ಮನಸ್ಸಿಗೂ ತಾಗುತ್ತಿಲ್ಲ. ಅವರು ತಮ್ಮ ಜೀವನದಲ್ಲೇ ಸುಖವಾಗಿ ಜೀವಿಸುತ್ತಿದ್ದಾರೆ ಎಂದರು.
ಸಮಾನತೆ ಭಿಕ್ಷೆಯಲ್ಲ, ಅದು ಎಲ್ಲ ಮನುಷ್ಯರಿಗೂ ದೊರೆಯಬೇಕು. ಈಗಿನ ಕಾಲಘಟ್ಟದಲ್ಲಿ ಅದುವೇ ಕಷ್ಟದ ಸಂಗತಿ. ಅಧಿಕಾರ, ಹಣ, ಜಾತಿ, ತೊಳ್ಬಲದಿಂದ ಜನರನ್ನು ಗುರುತಿಸಲಾಗುತ್ತಿದೆ. ಇದನ್ನು ಬಿಟ್ಟು ಮನುಷ್ಯರಾಗಿ ಗುರುತಿಸುವುದನ್ನು ಕಲಿಯುವುದು ಯಾವಾಗ ಎಂದು ಪ್ರಶ್ನಿಸಿದರು.
ಜಾತಿ, ಹಣ, ಅಧಿಕಾರ ಹೆಮ್ಮೆಯಲ್ಲ, ಅದು ಜೀವನಕ್ಕೆ ಅನಗತ್ಯ ಲಗೇಜ್. ಅದನ್ನು ಬಿಟ್ಟರೆ ನೆಮ್ಮದಿಯಿಂದ ಬದುಕು ಸಾಗಿಸಬಹುದು ಎಂದರು.
ಜಾತಿ ಸಮಾಜಕ್ಕೆ ಅಂಟಿದೆ. ಕವಚ ತೆಗೆದರೆ ಕರ್ಣ ಸಾಯುತ್ತಾನೆ. ಆದರೆ ಕೆಳಸ್ತರದವರು ಸತ್ತರೂ ಜಾತಿಯ ಕವಚ ತೆಗೆಯಲು ಆಗಲ್ಲ. ಕೆಲವರು ಜಾತಿ ಕವಚ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಂಡು ಮುಂದೆ ಬಂದಿದ್ದಾರೆ. ದಲಿತರಿಗೆ ಮಾತ್ರ ‘ಏಕೆ ಈ ಜಾತಿಯಲ್ಲಿ ಹುಟ್ಟಿದೆವು’ ಎಂಬ ಅವಮಾನ ನಿತ್ಯವೂ ಕಾಡುತ್ತಿದೆ. ಈಗ ಜಾತಿ ನಿರ್ಮೂಲನೆ ಬರೀ ಬಾಯಿ ಮಾತು, ಭಾಷಣವಾಗಿ ಉಳಿದುಕೊಂಡಿದೆ. 2022ರಲ್ಲೂ ಜಾತಿ ಅವಮಾನ ಮುಂದುವರಿದಿದೆ. ದಲಿತ ಮಹಿಳೆ ನೀರು ಕುಡಿದಳು ಎಂಬ ಕಾರಣಕ್ಕೆ ಟ್ಯಾಂಕ್‌ನಲ್ಲಿದ್ದ ನೀರನ್ನು ಖಾಲಿ ಮಾಡಿ, ಗಂಜಲ ಹಾಕಿ ಶುದ್ಧೀಕರಣ ಮಾಡಿರುವ ಘಟನೆ ಈಗಲೂ ಜಾತಿ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ತಾಜಾ ಉದಾಹರಣೆ ಎಂದು ಹೇಳಿದರು.
ಈಗಿನ ರಾಜಕಾರಣಿಗಳಿಗೆ ಮಾತಿನ ಮೇಲೆ ಹತೋಟಿ ಇಲ್ಲ. ಅಸಂಬದ್ಧ ಪ್ರಲಾಪದ ಮೂಲಕ ಸಮಾಜದಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಈ ಕುರಿತು ಎಚ್ಚರಿಸುವ ಸಾಹಿತಿಗಳ ಮಾತನ್ನು ಯಾರೂ ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಂಎಲ್‌ಸಿ ಡಾ.ಡಿ. ತಿಮ್ಮಯ್ಯ, ರಾಜ್ಯಸಭಾ ಸದಸ್ಯರೂ ಆದ ಕೃತಿಕಾರ ಡಾ.ಎಲ್.ಹನುಮಂತಯ್ಯ, ತವರು ಅರಸು ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಅರಸ್, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಎಚ್.ಎಸ್. ಸುರೇಶ್‌ಬಾಬು, ಕೃತಿ ಸಂಪಾದಕ ಡಾ.ಎಂ.ಜಿ.ಆರ್. ಅರಸ್ ಪಾಲ್ಗೊಂಡಿದ್ದರು.