ಜಿಲ್ಲೆ

ಸಮಾನತೆಗಾಗಿ ಕಾಯಕ ಸಿದ್ಧಾಂತ ಅನುಷ್ಠಾನ

ಕಡೂರು: ಜಾತ್ಯತೀತ, ಸಮಾನತೆಯ ಸಮಾಜ ನಿರ್ವಿುಸಬೇಕೆಂಬುದು ವಚನಕಾರರ ಮುಖ್ಯ ಉದ್ದೇಶವಾಗಿತ್ತು. ಇದಕ್ಕಾಗಿ ಬಸವಣ್ಣನ ಸಮಕಾಲೀನ ಶರಣರು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು ಎಂದು ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಹೇಳಿದರು. ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್​ನಿಂದ ಮಂಗಳವಾರ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ‘ಶರಣರು ಕಟ್ಟ ಬಯಸಿದ ಸಮಾಜ’ ಕುರಿತು ಉಪನ್ಯಾಸ ನೀಡಿದರು.

12ನೇ ಶತಮಾನದ ರಾಜ ಪ್ರಭುತ್ವದಿಂದ ರೈತರು, ಕೂಲಿ ಕಾರ್ವಿುಕರು ಶೋಷಣೆಗೆ ಒಳಗಾಗಿದ್ದರು. ಇದನ್ನು ಶರಣರು ವ್ಯಾಪಕವಾಗಿ ವಿರೋಧಿಸಿದ್ದರು. ದಬ್ಬಾಳಿಕೆಯಿಂದ ಶೋಷಿತ ವರ್ಗಗಳನ್ನು ಮುಕ್ತವಾಗಿಸಲು ಕಾಯಕ ಸಿದ್ಧಾಂತ ಪರಿಕಲ್ಪನೆ ಜಾರಿಗೊಳಿಸಿದರು ಎಂದರು. ಕಾಯಕ ಸಿದ್ಧಾಂತವು ಶೋಷಣೆ ವ್ಯವಸ್ಥೆ ಪ್ರತಿಪಾದಿಸುವ ಕರ್ಮ ಸಿದ್ಧಾಂತಕ್ಕೆ ಪರ್ಯಾಯವಾಗಿತ್ತು. ಶ್ರಮಿಕ ವರ್ಗಗಳನ್ನು ಕಾಯಕ ಸಿದ್ದಾಂತಕ್ಕೆ ಒಳಪಡಿಸಿ ಜಾತಿವಿನಾಶ ಸಮಾಜ ಸ್ಥಾಪಿಸುವುದೇ ಬಸವಣ್ಣನವರ ಬಹುದೊಡ್ಡ ಕಲ್ಪನೆಯಾಗಿತ್ತು ಎಂದು ಶಿವಶರಣರ ಕಾಲಘಟ್ಟದಲ್ಲಿ ಸಾಗಿದ ಹಾದಿ ಬಗ್ಗೆ ವಿಶ್ಲೇಷಿಸಿದರು.