ಮೈಸೂರು: ಬುದ್ಧ ಎಂಬ ಸುಜ್ಞಾನ ಸಾಗರಕ್ಕೆ ಮಹಾನದಿಯಾಗಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರು. ನಾವು ಅವರೊಂದಿಗೆ ಉಪ ನದಿಗಳಾಗಿ ಸೇರಿ ಪ್ರಬುದ್ಧ ಸಂವಿಧಾನ ಅನುಸರಿಸೋಣ ಎಂದು ತಿ.ನರಸೀಪುರದ ಕಲ್ಯಾಣ ಬಂತೇಜಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರನ್ನು ಭೌತಿಕವಾಗಿ ಕಳೆದುಕೊಂಡ ಈ ಮಹಾ ಪರಿನಿರ್ವಾಣ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ವಿವಿಧ ಭಾಷೆ, ಜನಾಂಗ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಪ್ರಜೆಗಳಿಗೆ ಸಮಾನತೆ ಸಾರುವ ಸಂವಿಧಾನವನ್ನು ನೀಡಿದವರು ಅಂಬೇಡ್ಕರ್. ಅವರ ಆದರ್ಶ ಹಾಗೂ ವ್ಯಕ್ತಿತ್ವ ಎಂದಿಗೂ, ಎಲ್ಲರಿಗೂ ಸ್ಫೂರ್ತಿ.ಅವರ ಚಿಂತನೆ, ಸಾಮಾಜಿಕ ಮೌಲ್ಯಗಳಿಗೆ ಬೆಲೆ ಕೊಡಬೇಕು ಎಂದರು.
ಇಂದಿಗೂ ಜಾತಿ ವ್ಯವಸ್ಥೆ ಇದ್ದು, ನಗರದ ಜೀವನಕ್ಕೆ ಒಗ್ಗಿಕೊಂಡು ಸಾಮಾಜಿಕ ವ್ಯವಸ್ಥೆ ಸುಧಾರಣೆ ಕಂಡಿದ್ದರೂ ಮಾನಸಿಕ ವ್ಯವಸ್ಥೆ ಸುಧಾರಣೆಗೊಂಡಿಲ್ಲ. ಎಲ್ಲಿಯವರೆಗೂ ಜಾತಿ ತಾರತಮ್ಯ ಹೋಗುವುದಿಲ್ಲವೋ, ಮಾನವೀಯ ಗುಣ ಬರುವುದಿಲ್ಲವೋ ಅಲ್ಲಿಯವರೆಗೂ ನಿಜವಾದ ಸ್ವಾತಂತ್ರೃ ಸಿಗುವುದಿಲ್ಲ.
ಎಲ್ಲರೂ ಸಂತೋಷದ ಜೀವನ ಬಯಸುತ್ತಾರೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಮಾರ್ಗ ಪಾಲಿಸುವುದಿಲ್ಲ. ಹೀಗಾಗಿಯೇ ಭ್ರಾತೃತ್ವದ ಭಾವನೆಯಿಂದ ಬದುಕಬೇಕಾದಂತಹ ಸಮಾಜದಲ್ಲಿ ಜಾತಿ ತಾಂಡವವಾಡಿ ಮೇಲು-ಕೀಳೆಂಬ ಭಾವ ಮೂಡಿದೆ ಎಂದರು.
ಪ್ರಬುದ್ಧ ಮನಸ್ಥಿತಿ ಹೊಂದಿದ್ದ ಬಾಬಾ ಸಾಹೇಬರು ಪಂಚಶೀಲದ ಪ್ರತಿರೂಪವಾಗಿದ್ದಾರೆ. ಅವರ ಜೀವನದುದ್ದಕ್ಕೂ ಯಾವುದೇ ಒಂದು ಕಪ್ಪು ಚುಕ್ಕಿಯಿಲ್ಲದಂತೆ ಬದುಕಿ, ಮುಂದಿನ ಪೀಳಿಗೆಗೆ ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಅವರ ಆಶಯ ಅನುಸರಿಸಿಕೊಂಡು ನಡೆಯಬೇಕು ಎಂದರು.
ದೇಶದಲ್ಲಿ ಧಾರ್ಮಿಕ, ಸಾಮಾಜಿಕವಾಗಿ ಸ್ವಾತಂತ್ರೃ ಇನ್ನೂ ದೊರೆತಿಲ್ಲ. ಅದು ಸಿಗಬೇಕೆಂದರೆ ಭಾರತೀಯರೆಲ್ಲರೂ ಸಹೋದರತೆಯಿಂದ ಬದುಕಬೇಕು. ಯಾವುದೇ ವ್ಯಕ್ತಿಯನ್ನು ಜಾತಿ-ಧರ್ಮ ಹಾಗೂ ವರ್ಣದಿಂದ ಅಳೆಯದೆ, ಪ್ರೀತಿಯಿಂದ ಭ್ರಾತೃತ್ವ ಭಾವನೆಯಿಂದ ಕಾಣಬೇಕೆಂಬುದೇ ಅಂಬೇಡ್ಕರ್ ಅವರ ಆಶಯ ಎಂದರು.
ಡಾ.ಕಲ್ಯಾಣ ಬಂತೇಜಿ ಹಾಗೂ ಬೋಧಿರತ್ನ ಬಂತೇಜಿ ಅವರು ಬುದ್ಧ ವಂದನೆ, ಧಮ್ಮವಂದನೆ ಹಾಗೂ ಸಂಘ ವಂದನೆಯನ್ನು ಬೋಧಿಸಿದರು. ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಪುಷ್ಪ ನಮನ ಸಲ್ಲಿಸಿದರು. ಜಿಪಂ ಸಿಇಒ ಕೆ.ಎಂ.ಗಾಯತ್ರಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಪಾಲಿಕೆಯ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ ಇನ್ನಿತರರಿದ್ದರು.