ಅರಸೀಕೆರೆ: ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ದಾರ್ಶನಿಕರಲ್ಲಿ ಬಸವೇಶ್ವರರು ಅಗ್ರಗಣ್ಯರಾಗಿದ್ದಾರೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಮಾಡಾಳು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ 16 ನೇ ವರ್ಷದ ಸಂಸ್ಮರಣೆ ಹಾಗೂ 23ನೇ ವರ್ಷದ ಜನಜಾಗೃತಿ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮೇಲು-ಕೀಳು, ಸೀ-ಪುರುಷ ಎನ್ನುವ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಸಮಾಜಮುಖಿ ಚಿಂತನೆಗಳನ್ನು ಪ್ರತಿಪಾದಿಸಿದ್ದರು. ಸಾಮಾನ್ಯ ಜನರಾಡುವ ಮಾತುಗಳನ್ನು ದೈವವಾಣಿಯನ್ನಾಗಿ ಪರಿವರ್ತಿಸಿದ ಕೀರ್ತಿ ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರಿಗೆ ಸಲ್ಲುತ್ತದೆ ಎಂದರು.
ಮನುಷ್ಯ ಹಾಗೂ ಭಗವಂತನ ನಡುವಿನ ಸಂಬಂಧ ಹೇಗಿರಬೇಕು ಎನ್ನುವುದು ವಚನಗಳಲ್ಲಿ ಅಡಗಿದೆ. ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಮಹಾಪುರುಷರನ್ನು ಸ್ಮರಿಸುವ ಜತೆಗೆ ಅವರ ಕಾಯಕವೇ ಕೈಲಾಸ ಎನ್ನುವ ತತ್ವ, ಚಿಂತನೆ, ಆದರ್ಶಗಳನ್ನು ಮೈಗೂಡಿಸಿಕೊಂಡಲ್ಲಿ ಸಾರ್ಥಕ ಜೀವನದ ಕ್ಷಣಗಳನ್ನು ಕಳೆಯಲು ಸಾಧ್ಯವಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಶ್ರೀಮಠಗಳಲ್ಲಿ ಆಯೋಜನೆಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸಿರಿಗೆರೆ ಸಾಣೆಹಳ್ಳಿ ಶಾಖಾ ಮಠದ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠ-ಮಂದಿರ ಕಟ್ಟುವ ಬದಲು ಮನಸ್ಸು ಬೆಸೆಯುವ ಕಾಯಕದಲ್ಲಿ ತಲ್ಲೀನರಾಗುವ ಮೂಲಕ ಶರಣರು ಮುಂದಿನ ಪೀಳಿಗೆಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಕೆಲ ಮಠಗಳು ಹಾಗೂ ಮಠಾಪತಿಗಳ ಮನಸ್ಸು ಕಲುಷಿತಗೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಮಾತುಗಳ ಮೂಲಕವೇ ಜಗತ್ತಿನ ಉದ್ಧಾರಕ್ಕೆ ಶ್ರಮಿಸಿದವರ ಆದರ್ಶ ಬದುಕು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಕಿವಿಮಾತು ಹೇಳಿದರು.
ತಿಪಟೂರು ತಾಲೂಕಿನ ಕೆರಗೋಡಿ ರಂಗಾಪುರ ಸುಕ್ಷೇತ್ರದ ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ನೇರ ನಡೆ-ನುಡಿಗಳಿಂದ ಲೋಪ ಸರಿಪಡಿಸುವ ಕೆಲಸ ಮಾಡುತ್ತಿದ್ದರು. ನ್ಯಾಯ ಮತ್ತು ನಿಷ್ಠುರತೆಯಿಂದ ನಡೆದುಕೊಳ್ಳುತ್ತಿದ್ದರಿಂದ ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. ರಾಜಕಾರಣಿಗಳ ಒಡನಾಟದಿಂದ ದೂರ ಉಳಿಯುವ ಮೂಲಕ ಮಠ ಮಾನ್ಯಗಳ ಗೌರವ ಹೆಚ್ಚುವಂತೆ ನಡೆದುಕೊಂಡಿದ್ದರು ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.
ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, 12ನೇ ಶತಮಾನದ ವಚನಕಾರರ ವಚನಧಾರೆಯ ಸುಧೆಯನ್ನು ಮನೆ ಮನಗೆ ತಲುಪಿಸುವ ಕೆಲಸ ನಡೆಯಬೇಕಾಗಿದೆ. ಜತೆಗೆ ಪಾಲಕರು ಮಕ್ಕಳಿಗೆ ಅತ್ಯುನ್ನತ ವೌಲ್ಯವುಳ್ಳ ಸಂದೇಶ ನೀಡಿದವರ ಬದುಕು-ಬವಣೆ ಪರಿಚಯ ಮಾಡಿಕೊಡುವ ಅಗತ್ಯವಿದೆ ಎಂದು ಹೇಳಿದರು.
ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಶ್ರೀಗಳು ಮಾತನಾಡಿದರು. ವಿಶ್ವಾರಾಧ್ಯ ಸತ್ಯಂಪೇಟೆ ಅವರು ಬಸವೇಶ್ವರರ ಸಾಧನೆ ಕುರಿತು ಉಪನ್ಯಾಸ ನೀಡಿದರು. ಕೋಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ, ಶ್ರೀ ರುದ್ರಮುನಿ ಸ್ವಾಮೀಜಿ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜು, ತಾಲೂಕು ಸಾಧು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹಿರಿಯೂರು ರೇವಣ್ಣ, ಮುಖಂಡ ಅಣ್ಣಾಯ್ಕನಹಳ್ಳಿ ವಿಜಯಕುಮಾರ್ ಇತರರಿದ್ದರು.