ಜಿಲ್ಲೆ

ಸಮಾಜಸೇವೆಗೆ ಕವಟಗಿಮಠ ನಿದರ್ಶನ

ಬೆಳಗಾವಿ: ಸಮಾಜ ಸೇವೆಯನ್ನು ಹೇಗೆಲ್ಲ ಮಾಡಬೇಕು ಎಂಬುದನ್ನು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರನ್ನು ನೋಡಿ ಕಲಿಯಬೇಕು ಎಂದು ಶಾಸಕ ಅನಿಲ ಬೆನಕೆ ಹೇಳಿದರು. ಇಲ್ಲಿನ ಗಾಂಧಿ ನಗರದ ಜೈ ಕಿಸಾನ್ ಹೋಲ್‌ಸೇಲ್ ತರಕಾರಿ ಮಾರುಕಟ್ಟೆಯಲ್ಲಿ ಮಹಾಂತೇಶ ಕವಟಗಿಮಠ ಜನ್ಮದಿನ ಆಚರಣೆ ಮಹಾಂತೇಶ ಕವಟಗಿಮಠ ಸೌಹಾರ್ದ ಸಹಕಾರಿ ಸಂಘ, ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ, ರೋಟರಿ ಕ್ಲಬ್ ವೇಣುಗ್ರಾಮ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಉಚಿತ ಕೋವಿಡ್ ಲಸಿಕೆ ಹಾಗೂ ಮಹಾ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಶಿಬಿರದಲ್ಲಿ ಪಾಲ್ಗೊಂಡವರಿಗೆ ದಿ ಓರಿಯಂಟಲ್ ಇನ್ಶುರೆನ್ಸ್ ಕಂ.ಲಿ ವತಿಯಿಂದ ಒಂದು ವರ್ಷದ ಅವಧಿಗೆ 2 ಲಕ್ಷ ರೂ.ವರೆಗಿನ ವೈಯಕ್ತಿಕ ಅಪಘಾತ ವಿಮೆ ನೀಡಲಾಯಿತು. ಶಿಬಿರದಲ್ಲಿ ರಕ್ತ ತಪಾಸಣೆ, ಮಧುಮೇಹ, ಕಿವಿ, ಮೂಗು, ಗಂಟಲು ತಪಾಸಣೆ, ಹಲ್ಲು ಮತ್ತು ಬಾಯಿ ಕ್ಯಾನ್ಸರ್ ತಪಾಸಣೆ, ಕಣ್ಣು ಹಾಗೂ ಚರ್ಮರೋಗ ತಪಾಸಣೆ ನಡೆಸಲಾಯಿತು.

ಕೂಲಿ ಕಾರ್ಮಿಕರು, ರೈತರು ಹಾಗೂ ಜನಸಾಮಾನ್ಯರು ಸೇರಿ ಒಟ್ಟು 350ಕ್ಕೂ ಹೆಚ್ಚು ಜನ ಶಿಬಿರದ ಸದುಪಯೋಗ ಪಡೆದುಕೊಂಡರು. ರೋಟರಿ ಕ್ಲಬ್ ವೇಣುಗ್ರಾಮದ ಅಧ್ಯಕ್ಷ ಉಮೇಶ ರಾಮಗುರವಾಡಿ, ಜೈ ಕಿಸಾನ್ ಹೋಲ್‌ಸೇಲ್ ತರಕಾರಿ ಮಾರುಕಟ್ಟೆ ಅಧ್ಯಕ್ಷ ದಿವಾಕರ ಪಾಟೀಲ, ಉಪಾಧ್ಯಕ್ಷ ಮೋಹನ ಮನ್ನೊಲಕರ, ಸದಸ್ಯರಾದ ವಿಶ್ವನಾಥ ಪಾಟೀಲ, ನಗರ ಸೇವಕರಾದ ರಾಜಶೇಖರ ಡೋಣಿ, ರೇಣುಕಾ ಹೂಗಾರ, ಸದಾನಂದ ಗುಂಟೆಪ್ಪನವರ, ಯುವ ನೇತಾರರಾದ ಶರತಚಂದ್ರ ಕವಟಗಿಮಠ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಇತರರಿದ್ದರು.