ಜಿಲ್ಲೆ

ಸಮಾಜವಾದದ ಪರಿಕಲ್ಪನೆ ಗಟ್ಟಿಯಾಗಬೇಕು

ಸಕಲೇಶಪುರ: ಸಮಾಜವಾದದ ಪರಿಕಲ್ಪನೆ ಗಟ್ಟಿಯಾದಾಗ ಮಾತ್ರ ಗಣರಾಜ್ಯೋತ್ಸವಕ್ಕೆ ಶಕ್ತಿ ಬರಲಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.

ಗುರುವಾರ ತಾಲೂಕು ಆಡಳಿತ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 74 ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರೃ ಭಾರತ ಬಲಿಷ್ಠವಾಗಲು ಹಿರಿಯರು ಗಣತಂತ್ರ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಆದರೆ, ಇಂದು ಬಡವ ಹಾಗೂ ಬಲ್ಲಿದರ ನಡುವೆ ಅಂತರ ಹೆಚ್ಚಾಗುತ್ತಿದೆ. ದೇಶದ ಸಂಪತ್ತು ದೇಶದ ಶೇ.1ರಷ್ಟು ಜನರಲ್ಲಿ ಶೇ.80 ರಷ್ಟು ಶೇಖರಣೆಯಾಗಿದೆ. ಇದು ಅಸಮಾನತೆಗೆ ದಾರಿಯಾಗಿದ್ದು, ಆರ್ಥಿಕವಾಗಿ, ಸಮಾಜಿಕವಾಗಿ, ರಾಜಕೀಯವಾಗಿ ಎಲ್ಲರಿಗೂ ಶಕ್ತಿ ದೊರೆತಾಗ ಮಾತ್ರ ಗಣರಾಜ್ಯೋತ್ಸವಕ್ಕೆ ಅರ್ಥ ಬರಲಿದೆ. ಮೇಧಾವಿಗಳು ನೀಡಿದ ಗಣತಂತ್ರ ವ್ಯವಸ್ಥೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕಾದಲ್ಲಿ ಸಮಾಜವಾದದ ಬೇರು ಗಟ್ಟಿಯಾಗಲೇ ಬೇಕು ಎಂದರು.


ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಅನ್ಮುಲ್ ಜೈನ್ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಜನರಲ್ಲಿ ದೇಶ ಪ್ರೇಮ ಗಟ್ಟಿಯಾದಾಗ ಮಾತ್ರ ಸಮಸ್ಯೆಗಳನ್ನು ಎದುರಿಸಬಹುದಾಗಿದೆ. ಸಾವಿರಾರು ಜನರ ತ್ಯಾಗಬಲಿದಾನದ ಮೂಲಕ ಗಳಿಸಿಕೊಟ್ಟ ಗಣತಂತ್ರ ವ್ಯವಸ್ಥೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದರು.


ಕಾರ್ಯಕ್ರಮದಲ್ಲಿ ಪತ್ರಕರ್ತ ಸುಧೀರ್‌ಭಟ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಕಾಡಪ್ಪ, ತಹಸೀಲ್ದಾರ್ ಮೇಘನಾ, ಅಪಾರ ಪೋಲಿಸ್ ವರೀಷ್ಠಾಧಿಕಾರಿ ಮಿಥುನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಉದಯ್ ಮುಂತಾದವರಿದ್ದರು.