ಕುಶಾಲನಗರ: ವಿದ್ಯಾರ್ಥಿ ದಿಸೆಯಿಂದಲೇ ಸಮಾಜಮುಖಿ ಜೀವನ ನಡೆಸುವತ್ತ ಗಮನ ಹರಿಸಬೇಕು ಎಂದು ಅಂಕಣಕಾರ ಆದರ್ಶ ಗೋಖಲೆ ಸಲಹೆ ನೀಡಿದರು.
ಇಲ್ಲಿನ ವಿವೇಕಾನಂದ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಂದ ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಿಂದಲೇ ಸಮಾಜ ಮುಖಿಯಾಗಿ ಬದುಕುವ ಮನಸು ಮಾಡಬೇಕು. ಮನೆ ಮತ್ತು ವಿದ್ಯೆ ಕಲಿತ ಶಿಕ್ಷಣ ಸಂಸ್ಥೆಗೆ ಕೀರ್ತಿ ತರುವ ಮುಖಾಂತರ ಸಾರ್ಥಕ ಬದುಕು ನಿಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.
ವಿವೇಕಾನಂದರ ಜೀವನದ ಮೌಲ್ಯವನ್ನು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಅಡಕ ಮಾಡಿಕೊಂಡು ಸಾಧಿಸುವ ಛಲವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪಿರಿಯಾಪಟ್ಟಣದ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ದೇವರಾಜ್ ಮಾತನಾಡಿ, ಮನೆಯನ್ನು ಶುಚಿಗೊಳಿಸಲು ಹೆಣಗಾಡುವ ನಾವು ನಗರವನ್ನೇ ಶುದ್ಧಿಗೊಳಿಸಿ ನಮಗೆ ಆರೋಗ್ಯ ಜೀವನ ನಡೆಸಲು ಸಹಕರಿಸುವವರನ್ನು ನಾವು ಗೌರವಿಸಬೇಕು ಎಂದರು.
ಹಿರಿಯ ಪೌರಕಾರ್ಮಿಕರಿಗೆ ಸನ್ಮಾನ: ಸೇವೆಯಿಂದ ನಿವೃತ್ತಿ ಹೊಂದಿದ ಹಿರಿಯ ಜೀವಗಳಾದ ಆಂಜನೇಯ ಮತ್ತು ರಾಮಸ್ವಾಮಿ ದಂಪತಿಯನ್ನು ವಿವೇಕಾನಂದ ಕಾಲೇಜಿನ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಸನ್ಮಾನಿಸಿದರು.
ಪ್ರಾಂಶುಪಾಲೆ ಕ್ಲಾರ ರೇಶ್ಮ, ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಟಿ.ಎ.ಲಿಖಿತಾ, ಕನ್ನಡ ಉಪನ್ಯಾಸಕ ಚಂದ್ರಶೇಖರ್, ಹಂಡರಂಗಿ ನಾಗರಾಜ್ ಇತರರು ಹಾಜರಿದ್ದರು.