ಜಿಲ್ಲೆ

ಸಮಾಜಮುಖಿ ಕೆಲಸಗಳಿಗೆ ಸರೋಜಾದೇವಿ ಮಾದರಿ

ರಾಜಣ್ಣ

ಕೆ.ಆರ್.ನಗರ: ಭಾರತೀಯ ಚಿತ್ರರಂಗದ ಸಾಂಸ್ಕೃತಿಕ ರಾಯಭಾರಿಯಂತಿದ್ದ ದಿ.ಬಿ.ಸರೋಜಾದೇವಿ ಅವರು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಲ್ಲದೆ, ನಿಜ ಜೀವನದಲ್ಲೂ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿ ಕಲಾವಿದರಿಗೆ ಮಾದರಿಯಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿಂಡಿಮ ಶಂಕರ್ ಬಣ್ಣಿಸಿದರು.

ಪಟ್ಟಣದ ರೋಟರಿ ಭವನದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಸಂಸ್ಕೃತ ಕುಟುಂಬದಿಂದ ಬೆಳ್ಳಿತೆರೆಗೆ ಬಂದ ಸರೋಜಾದೇವಿ ನಟಿಸಿದ ಮೊದಲ ಚಿತ್ರದಲ್ಲಿಯೇ ಪ್ರಖ್ಯಾತಿ ಗಳಿಸಿದರು. ಅವರು ಒಲ್ಲದ ಮನಸ್ಸಿನಿಂದಲೇ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡವರು ಎಂದರು.

ಅವರ ಅಭಿನಯ ಮತ್ತು ಸೌಂದರ್ಯ ಬಹುಭಾಷಾ ತಾರೆಯನ್ನಾಗಿಸಿತು. ಸರೋಜಾದೇವಿ ನಟಿಸಿದ ಕನ್ನಡ, ತೆಲಗು, ತಮಿಳು ಮತ್ತು ಹಿಂದಿ ಭಾಷೆಗಳ ಮೊದಲ ಚಿತ್ರಗಳೇ ಹೆಚ್ಚು ಪ್ರದರ್ಶನ ಕಂಡು ಸಾರ್ವಕಾಲಿಕ ಯಶಸ್ಸು ಗಳಿಸಿ ಡಾ.ರಾಜಕುಮಾರ್, ಎನ್‌ಟಿಆರ್, ಎಂಜಿಆರ್ ಪ್ರಶಸ್ತಿಗಳನ್ನು ಪಡೆದುಕೊಂಡ ಮೊದಲಿಗರೆನಿಸಿದರು ಎಂದರು.

ಕನ್ನಡ ಛಾಯೆಯನ್ನು ತಮಿಳಿನವರು ಒಪ್ಪಿಕೊಳ್ಳುವಂತೆ ಮಾಡಿ, ಜನಪ್ರಿಯ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡು ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಪ್ರಶಸ್ತಿ ಪಡೆದವರು. 6 ದಶಕಗಳ ಕಾಲ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಿನಿರಂಗದಲ್ಲಿ ನಟಿಸಿದ ಖ್ಯಾತ ಕಲಾವಿದೆ ಬಿ.ಸರೋಜಾದೇವಿ. ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದ ‘ನಿಮಗೇಕೆ ಕೊಡಬೇಕು ಕಪ್ಪ’ ಸಂಭಾಷಣೆ 64 ವರ್ಷಗಳು ಕಳೆದರೂ ಜನಪ್ರಿಯವಾಗಿಯೇ ಇದೆ. 1ನೇ ತರಗತಿಯಿಂದ ಕಾಲೇಜು ವಿದ್ಯಾರ್ಥಿಗಳು ಏಕಪಾತ್ರ ಅಭಿನಯ ಮಾಡಿ ಬಹುಮಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಬಿ.ಸರೋಜಾದೇವಿ ಅವರು ತಮ್ಮ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದಲ್ಲದೆ, ಇವರಿಂದ ವಿದ್ಯಾಭ್ಯಾಸಕ್ಕೆ ಸಹಾಯ ಪಡೆದ ನೂರಾರು ಮಂದಿ ವೈದ್ಯ, ಇಂಜಿನಿಯರಿಂಗ್, ಐಎಎಸ್, ಕೆಎಎಸ್ ಅಧಿಕಾರಿಗಳಾಗಿರುವುದು ಇವರ ಸಮಾಜಮುಖಿ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅವರನ್ನು ಕಳೆದುಕೊಂಡ ಇಡೀ ಚಿತ್ರರಂಗಕ್ಕೆ ಹಾಗೂ ನಾಡಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ರೋಟರಿ ಕ್ಲಬ್‌ನ ಅಧ್ಯಕ್ಷ ಟಿ.ಎನ್.ದಯಾನಂದ್, ರಾವ್ ಬಹದ್ದೂರ್ ಸೇವಾ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್, ಸಾಹಿತಿ ಹೆಗ್ಗಂದೂರು ಪ್ರಭಾಕರ್, ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣ ಮಾತನಾಡಿದರು.

ತಾಪಂ ಮಾಜಿ ಅಧ್ಯಕ್ಷ ಮಿರ್ಲೆ ರಾಧಾಕೃಷ್ಣ, ಕಸಾಪ ನಗರಾಧ್ಯಕ್ಷ ಸಿ.ವಿ.ಮೋಹನ್ ಕುಮಾರ್, ಕಸಾಪ ತಾಲೂಕು ಗೌರವಾಧ್ಯಕ್ಣ ಕಾರ್ಯದರ್ಶಿ ಉದಯಕುಮಾರ್, ಉಪಾಧ್ಯಕ್ಷರಾದ ರಾಮಕೃಷ್ಣ, ಬಿಎಸ್‌ಎನ್‌ಎಲ್ ಕೆ.ಎಚ್.ಕೃಷ್ಣಯ್ಯ, ಮುಖಂಡರಾದ ಚಂದ್ರಶೇಖರ್, ರಾಜು, ರಾಮಚಂದ್ರ, ಬಸವರಾಜು, ಚೇತನ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾದ ಶಶಿಭೂಷಣ್, ಬ್ಯಾಂಕ್ ರಾಘವೇಂದ್ರ, ರಾಜ್ಯ ರೈತ ಪರ್ವ ಸಂಘದ ಗೌರವಾಧ್ಯಕ್ಷ ಜೆ.ಎಂ.ಕುಮಾರ್ ಇನ್ನಿತರರಿದ್ದರು.