ಪಾಂಡವಪುರ: ಮಂಡ್ಯ ಜಿಲ್ಲಾ ಪೊಲೀಸ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ತಾಲೂಕಿನ ಚಿನಕುರಳಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆಯನ್ನು ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಉದ್ಘಾಟಿಸಿದರು.
ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು, ಬೌದ್ಧಿಕ ಮತ್ತು ದೈಹಿಕ ಶಿಕ್ಷಣದ ತರಬೇತಿ ನೀಡಲು ಯೋಜನೆ ಜಾರಿಗೊಳಿಸಿದೆ. ಪ್ರೌಢಶಾಲೆಯ 40 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು 2 ವರ್ಷಗಳ ತರಬೇತಿ ನೀಡಲಾಗುವುದು. ಈ ತರಬೇತಿ ಪೊಲೀಸ್ ಇಲಾಖೆ ಸೇರಿದವರಿಗೆ ಮಾತ್ರ ಸಿಗುತ್ತಿತ್ತು. ಆದರೆ ಸರ್ಕಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈ ತರಬೇತಿ ನೀಡಲು ಸರ್ಕಾರ ಯೋಜನೆ ರೂಪಿಸಿದೆ ಎಂದು ತಿಳಿಸಿದರು.
ಕಾನೂನು ಪಾಲನೆ ಮಾಡುವ ಮೂಲಕ ಸಮಾಜದಲ್ಲಿನ ಪಿಡುಗುಗಳನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಅಪರಾಧ ಅಥವಾ ಅಪಘಾತ ನಡೆದ ಸಂದರ್ಭ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಹಿತಕರ ಘಟನಾವಳಿಗಳು ನಡೆದಾಗ ಹೇಗೆ ನಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ತಿಳಿಸಿಕೊಡಲಾಗುವುದು ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಮಹದೇವಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ್, ಉಪನ್ಯಾಸಕರಾದ ನಂಜರಾಜ, ಶಿವಪ್ರಕಾಶ್, ದೈಹಿಕ ಶಿಕ್ಷಕ ಮಹೇಶ್ ಇತರರು ಇದ್ದರು.