ಜಿಲ್ಲೆ

ಸಮಾಜದಲ್ಲಿದ್ದ ದಾಸ್ಯ ಸಂಕೋಲೆಗಳನ್ನು ವಿರೋಧಿಸಿದ್ದ ಶ್ರೇಷ್ಠ

ಕುಶಾಲನಗರ: ಹದಿನೈದನೇ ಶತಮಾನದಲ್ಲಿ ಸಮಾಜದಲ್ಲಿದ್ದ ದಾಸ್ಯ ಸಂಕೋಲೆಗಳನ್ನು ವಿರೋಧಿಸಿದ್ದ ಕನಕ ದಾಸರು ಈ ನಾಡು ಕಂಡ ಶ್ರೇಷ್ಠ ದಾರ್ಶನಿಕ ಮತ್ತು ಶ್ರೇಷ್ಠರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ.ಶಶಿಧರ್ ಹೇಳಿದರು.


ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ಸಾಹಿತ್ಯದ ನಡಿಗೆ ವಿದ್ಯಾರ್ಥಿಗಳೆಡೆಗೆ ಕಾರ್ಯಕ್ರಮದಡಿ ಸ್ಥಳೀಯ ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಹದಿನೈದನೇ ಶತಮಾನದಲ್ಲಿ ಅಂದಿನ ಸಾಮಾಜಿಕ ವಿಪ್ಲವಗಳು ಹಾಗೂ ಅಂದಿನ ಸಾಮಾನ್ಯ ಜನರ ದೈನೇಸಿ ಪರಿಸ್ಥಿತಿಗಳ ಅವಲೋಕನ ಅವರ ಕೀರ್ತನೆಗಳಲ್ಲಿ ಸಾತ್ವಿಕವಾದ ಆಕ್ರೋಶ ವ್ಯಕ್ತವಾಗಿತ್ತು. ಹಾಗೆಯೇ ಜಾತಿ, ಧರ್ಮ, ಭಾಷೆ, ಆಚಾರ-ವಿಚಾರ ಹಾಗೂ ಸಂಸ್ಕೃತಿಗಳನ್ನು ಕಟ್ಟುವ ಅಪ್ಪಟ ಮನುಷ್ಯ ಪ್ರೀತಿ ಕನಕದಾಸರದ್ದಾಗಿತ್ತು. ಅಲ್ಲದೆ ಹಲವು ವೈಶಿಷ್ಟ್ಯ ಪೂರ್ಣ ಬರಹಗಳು ಸಾಹಿತ್ಯ ಲೋಕದ ಬೌದ್ಧಿಕ ವಿಕಸನಕ್ಕೆ ದಾರಿ ದೀಪವಾಗಿತ್ತು ಎಂದು ಶಶಿಧರ್ ವ್ಯಾಖ್ಯಾನಿಸಿದರು.


ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಕುಶಾಲನಗರದ ಅನುಗ್ರಹ ಪಿಯು ಕಾಲೇಜಿನ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ, ಯಾವುದೇ ಕಾವ್ಯ ಅಥವಾ ಬರಹ ಜೀವನದ ಅನುಭವದ ಮೂಸೆಯಲ್ಲಿ ಮೂಡಿಬರಬೇಕು. ಆ ನಿಟ್ಟಿನಲ್ಲಿ ಅಂದು ಸಮಾಜದಲ್ಲಿದ್ದ ಅಸಮಾನತೆ ಗಳನ್ನು ದಾಸ ಶ್ರೇಷ್ಠರು ತಮ್ಮ ಸಾಹಿತ್ಯದಲ್ಲಿ ತಿಳಿಸಿದ್ದು, ಇಂದಿಗೂ ಜನಮಾನಸದಲ್ಲಿ ಗಟ್ಟಿ ಯಾಗಿ ಉಳಿದಿದೆ. ತಮ್ಮದೇ ಆದ ಕೀರ್ತನೆಗಳ ಮೂಲಕ ಸಾಹಿತ್ಯಕ್ಕೆ ಕೊಡುಗೆ ನೀಡಿದ ಪುರಂದರ ಹಾಗೂ ಕನಕದಾಸರು ನಾಡು ಕಂಡ ಸರ್ವ ಶ್ರೇಷ್ಠ ದಾರ್ಶನಿಕರು ಎಂದು ಲೀಲಾಕುಮಾರಿ ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಆರ್.ಮಂಜುಳ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಜಿ.ಮನು ಮಾತ ನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.


ವಸತಿ ನಿಲಯದ ಮೇಲ್ವಿಚಾರಕಿ ಎನ್.ಸಿ.ಗಾಯತ್ರಿ, ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಕೆ.ವಿ.ಉಮೇಶ್, ನಿರ್ದೇಶಕರಾದ ಎಂ.ಎನ್.ಕಾಳಪ್ಪ, ವನಿತಾ ಕಾಳಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಇದ್ದರು.