ಬಸವಕಲ್ಯಾಣ: ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಬಸವಕಲ್ಯಾಣ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಹೇಳಿದರು.
ನಗರದ ಬಸವಕಲ್ಯಾಣ ಶಿಕ್ಷಣ ಮಹಾವಿದ್ಯಾಲಯದಿಂದ ಅನುಭವ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಮುಖ್ಯ. ಇದರ ಜತೆಗೆ ಮಕ್ಕಳಲ್ಲಿ ನಾಗರಿಕತ್ವ, ಸೇವಾ ಮನೋಭಾವನೆ ಬೆಳೆಸುವಲ್ಲಿ ಕಾಳಜಿ ವಹಿಸಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ಬಸವಕಲ್ಯಾಣ ಎಂಜಿನೀಯರಿಂಗ್ ಕಾಲೇಜಿನ ಕುಲಸಚಿವ ಪ್ರೇಮಸಾಗರ ಪಾಟೀಲ್ ಮಾತನಾಡಿ, ಸಮಯ ಪ್ರಜ್ಞೆ ಜತೆಗೆ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಅಧ್ಯಯನ ಶೀಲತೆಯ ಜತೆಗೆ ಗ್ರಾಮೀಣ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡಾಗ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿಇಡಿ ಕಾಲೇಜು ಪ್ರಾಚಾರ್ಯ ಡಾ.ನಾಗಯ್ಯ ಸ್ವಾಮಿ ಮಾತನಾಡಿ, ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಅವಶ್ಯಕ. ಉತ್ತಮ ಶಿಕ್ಷಣದ ಜತೆಗೆ ಅವರಲ್ಲಿ ಆದರ್ಶ ಮೌಲ್ಯಗಳನ್ನು ಬೆಳೆಸಿ, ಅವರ ವ್ಯಕ್ತಿತ್ವ ರೂಪಿಸುವಲ್ಲಿಯೂ ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ ಎಂದರು.
ಐಟಿಐ ಪ್ರಾಚಾರ್ಯ ಶಿವಕುಮಾರ ಸ್ವಾಮಿ ಮಾತನಾಡಿದರು. ಅನುಭವ ಮಂಪದ ವ್ಯವಸ್ಥಾಪಕ ಶಂಕರ ಮೈದುರಗೈ, ಪೂಜ್ಯ ಹಾಲಮ್ಮ ತಾಯಿ ಇತರರಿದ್ದರು.
ಶಿಬಿರದ ನಿರ್ದೇಶಕ ರಾಮಚಂದ್ರ ಶರಣನಗರ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಧಮ್ಮಸಾಗರ ವಂದಿಸಿದರು. ಸಹ ನಿರ್ದೇಶಕ ಮನೋಜಕುಮಾರ ಕೆರಳ್ಳಿ ನಿರೂಪಣೆ ಮಾಡಿದರು. ಪ್ರಭಾವತಿ ಸ್ವಾಗತಗೀತೆ ಹಾಡಿದರು.