ಹಾಸನ: ವೈದ್ಯರ ಪಾತ್ರ ಸಮಾಜದಲ್ಲಿ ಬಹಳ ಪ್ರಮುಖವಾದದ್ದು ಅವರ ಸೇವೆ ಪ್ರತಿಯೊಬ್ಬರಿಗೂ ತುಂಬಾ ಅಗತ್ಯವಾಗಿರುತ್ತದೆ ಎಂದು ಹಿರಿಯ ನ್ಯಾಯಾಧೀಶ ಬಿ.ಕೆ ರವಿಕಾಂತ್ ಹೇಳಿದರು.
ನಗರದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಶುಕ್ರವಾರ ಜಿಲ್ಲಾ ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟಿಸಿ ಮಾತನಾಡಿದ ಅವರು , ಹುಟ್ಟಿದಾಗಿನಿಂದ ಸಾಯುವವರೆಗೂ ಮನುಷ್ಯನಿಗೆ ಯಾವುದಾದರೂ ಒಂದು ಕಾಯಿಲೆ ಬರುತ್ತದೆ, ವೈದ್ಯರು ಮೊರೆ ಹೋಗದೆ ಇದ್ದಾಗ ಅದು ಮಾರಣಾಂತಿಕವಾಗಿ ಪರಿಣಮಿಸಬಹುದು ಎಂದರು.
ಆರೋಗ್ಯ ಶಿಬಿರಗಳು ಹೆಚ್ಚು ಹೆಚ್ಚು ನಡೆಯುತ್ತಿರಬೇಕು. ಇಂಥ ಶಿಬಿರಗಳು ಮಾಡಿದಾಗ ಸಾಕಷ್ಟು ಜನರಿಗೆ ಉಪಯೋಗವಾಗುತ್ತದೆ ಎಂದು ಹೇಳಿದರು.
ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್ ಮಾತನಾಡಿ, ಗರ್ಭಕೋಶದ ಕಾಯಿಲೆಗಳಿಂದ ಹೆಚ್ಚಿನ ಮಹಿಳೆಯರು ಸಾವನಪುತ್ತಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಗರ್ಭಕೋಶದ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ನಾಲ್ಕೈದು ಸಾವಿರ ವೆಚ್ಚವಾಗುವಂತಹ ಪ್ಯಾಪ್ ಸ್ಮಿಯರ್ ಮತ್ತು ಮ್ಯಾಮೊಗ್ರಫಿ ಪರೀಕ್ಷೆ ರೋಗಗಳ ತಪಾಸಣೆಯನ್ನು ಮಾಡುತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಎಂಎ ಅಧ್ಯಕ್ಷ ಡಾ.ಅಬ್ದುಲ್ ಬಷೀರ್ ಮಾತನಾಡಿ, ಉಚಿತ ಆರೋಗ್ಯ ಶಿಬಿರವನ್ನು ಜೀವ ಉಳಿಸುವ ಕಾರ್ಯಕ್ರಮ ಎಂದು ಪರಿಗಣಿಸಬಹುದು. ವಿವಿಧ ವೈದ್ಯಕೀಯ ವಿಶೇಷ ಸೇವೆಗಳೊಂದಿಗೆ ಗ್ರಾಮೀಣ ಅಥವಾ ನಗರ ಪ್ರದೇಶದಲ್ಲಿ ವಾಸಿಸುವ ಬಡ ಸಮುದಾಯಗಳಿಗೆ ಉಚಿತ ಆರೋಗ್ಯ ಶಿಬಿರವು ಉಪಯೋಗವಾಗುತ್ತದೆ. ಇಂತಹ ಶಿಬಿರಗಳನ್ನು ಇನ್ನು ಹೆಚ್ಚಿಗೆ ಆಯೋಜಿಸುತ್ತೇವೆಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮುಖ್ಯ ಆಯುಕ್ತ ಡಾ. ವೈ ಎಸ್ ವೀರಭದ್ರಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್, ಹಿರಿಯ ವೈದ್ಯ ಡಾ. ಸಾವಿತ್ರಿ, ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ. ವೆಂಕಟೇಶ್ ಮೂರ್ತಿ, ರೈತ ಹೋರಾಟಗಾರರ ಮಂಜುನಾಥ ದತ್ತ, ಹಿರಿಯ ನಾಗರಿಕ ವೇದಿಕೆಯ ಕಾರ್ಯದರ್ಶಿಬಿ.ಕೆ ಮಂಜುನಾಥ್, ಹೆಚ್.ಎಂ ಶಿವಣ್ಣ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೃಷ್ಣೆಗೌಡ, ಐಎಂಎ ಪದಾಧಿಕಾರಿಗಳು, ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು, ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ವೈದ್ಯರು ಭಾಗವಹಿಸಿದ್ದರು.
ಶಿಬಿರದಲ್ಲಿ ಹಲವು ತಜ್ಞ ವೈದ್ಯರು ಭಾಗವಹಿಸಿ 100 ಜನರಿಗೆ ಪ್ಯಾಪ್ ಸ್ಮಿಯರ್ ಮತ್ತು 60ಜನರಿಗೆ ಮ್ಯಾಮೊಗ್ರಪಿ ಪರೀಕ್ಷೆ ಮಾಡಲಾಯಿತು, ಉಚಿತವಾಗಿ 200 ಜನರಿಗೆ ರಕ್ತ ಪರೀಕ್ಷೆಯನ್ನು ಅನಂದ್ ದಾಸ್ ಲ್ಯಾಬ್‌ನಿಂದ ಮಾಡಿಕೊಡಲಾಯಿತು, 200 ಜನರಿಗೆ ಇಸಿಜಿ, 100 ಜನರಿಗೆ ಹೃದಯದ ಏಕೋ ಸ್ಕ್ಯಾನಿಂಗ್‌ಅನ್ನು ಜನಪ್ರೀಯ ಆಸ್ಪತ್ರೆಯಿಂದ ಮಾಡಿಕೊಡಲಾಯಿತು. ಇನ್ನಿತರೆ ಚಿಕಿತ್ಸೆಗಳನ್ನು ಸುಮಾರು 350 ರಿಂದ 400 ಜನರು ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಶಿಬಿರವನ್ನು ಯಶಸ್ವಿಗೊಳಿಸಿದರು.