ಜಿಲ್ಲೆ

ಸಮಾಜದಲ್ಲಿ ಪೌರಕಾರ್ಮಿಕರ ಸೇವೆ ಅನನ್ಯ

ಎ.ಎಸ್.ಮಣಿಕಂಠ

*ಎಂಎಸ್ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ

*ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ

ಚಾಮರಾಜನಗರ: ಪ್ರತಿಯೊಬ್ಬರು ಆರೋಗ್ಯವಂತ ಜೀವನ ನಡೆಸುವಲ್ಲಿ ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ ಎಂದು ಎಂಎಸ್ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾರ್ಮಿಕ ಕಾಯ್ದೆಯ ಮೂಲಕ ಅನೇಕ ಸವಲತ್ತುಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ಯಾವುದೇ ಹುದ್ದೆಗಳಲ್ಲಿ ಮೇಲು-ಕೀಳು ಎಂಬುದಿಲ್ಲ. ಇತ್ತೀಚಿನ ದಿನಗಳಲ್ಲಿ ಬೇರೆ ಸಮುದಾಯದವರು ಪೌರಕಾರ್ಮಿಕರ ವೃತ್ತಿ ಮಾಡುತ್ತಿದ್ದಾರೆ. ನಗರದ ಸ್ವಚ್ಛತೆಯಲ್ಲಿ ಅವರ ಸೇವೆ ಅನನ್ಯವಾಗಿದೆ ಎಂದು ತಿಳಿಸಿದರು.

ಪೌರಕಾರ್ಮಿಕರು ಕೇವಲ 15 ದಿನ ತಮ್ಮ ಕೆಲಸಕ್ಕೆ ವಿರಾಮ ಹೇಳಿದರೇ, ಸಾರ್ವಜನಿಕರಿಗೆ ಬಹುದೊಡ್ಡ ಸಮಸ್ಯೆ ಉಂಟಾಗುತ್ತದೆ. ಪೌರ ಕಾರ್ಮಿಕರು ಮಕ್ಕಳಿಗೆ ಸೂಕ್ತ ರೀತಿಯಲ್ಲಿ ವಿದ್ಯಾಭ್ಯಾಸ ನೀಡಬೇಕು. ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ನೀಡಬೇಕು. ಯಾರಿಗೆ ನಿವೇಶನ ಇಲ್ಲ ಎಂಬುವವರಿಗೆ ಹೊಸ ನಿವೇಶನ ನೀಡಲಾಗುವುದು. ಪೌರ ಕಾರ್ಮಿಕರ ‌ಹುದ್ದೆ ಅಮೂಲ್ಯವಾಗಿದ್ದು, ಅದನ್ನು ಯಾರು ಲಘುವಾಗಿ ಕಾಣಬಾರದು ಎಂದರು.

ಪೌರಾಯುಕ್ತ ರಾಮದಾಸ್ ಮಾತನಾಡಿ, ಪೌರ ಕಾರ್ಮಿಕರ ಸೇವೆ ತುಂಬಾ ಮಹತ್ವವಾಗಿದೆ. ಅವರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅವರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸ್ವಚ್ಛತಾ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೌರ ಕಾರ್ಮಿಕರನ್ನು ಸಮಾಜದ ಮತ್ತೊಬ್ಬ ವೈದ್ಯ ಎಂದು ಕರೆಯಬಹುದಾಗಿದೆ. ನಗರದ ಸ್ವಚ್ಛತೆಯಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷೆ ಮಮತಾ ಮಾತನಾಡಿ, ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಆದರ್ಶವನ್ನು ಪೌರ ಕಾರ್ಮಿಕರು ಸಾಕಾರಗೊಳಿಸಿದ್ದಾರೆ. ಪೌರ ಕಾರ್ಮಿಕರು ಸಮಾಜದಲ್ಲಿ ಮನಃಪೂರ್ವಕ ಮತ್ತು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶವನ್ನು ಸ್ವಚ್ಛ ಭಾರತ ಎಂದು ಕರೆಯಲು ಪೌರ ಕಾರ್ಮಿಕರು ಕಾರಣರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭಾ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ, ಚುಡಾ ಅಧ್ಯಕ್ಷ ಮೊಹಮ್ಮದ್ ಅಸ್ಗರ್ (ಮುನ್ನಾ), ನಗರಸಭಾ ಸದಸ್ಯರಾದ ಎಂ.ಮಹೇಶ್, ಕುಮುದಾ ಕೇಶವಮೂರ್ತಿ, ಬಸವಣ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ಎಂ.ಸವಿತಾ, ನಗರಸಭಾ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಸುಧಾ, ಎಇಇ ಲಲಿತಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜ್, ಪರಿಶಿಷ್ಟ ಪಂಗಡ ಇಲಾಖೆಯ ತಾಲೂಕು ಅಧಿಕಾರಿ ಸುಬ್ಬರಾಯ, ನಾಮ ನಿರ್ದೇಶಿತ ಸದಸ್ಯ ಸ್ವಾಮಿ, ಸಿದ್ದರಾಜು, ಮಾಜಿ ಚುಡಾ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ ಹಾಗೂ ಇತರರು ಉಪಸ್ಥಿತರಿದ್ದರು.

ಸಂಭ್ರಮದ ಮೆರವಣಿಗೆ:

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.

ನಗರಸಭೆ ಕಚೇರಿ ಮುಂಭಾಗದಿಂದ ಪ್ರಾರಂಭವಾದ ಮೆರವಣಿಗೆ ಶ್ರೀ ಭುವನೇಶ್ವರಿ ವೃತ್ತ, ಡಿವಿಯೇಷನ್ ರಸ್ತೆ, ಸುಲ್ತಾನ್ ಷರೀಫ್ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ ಹಾಗೂ ಸಂತೇಮರಹಳ್ಳಿ ವೃತ್ತದ ಮಾರ್ಗವಾಗಿ ಸಾಗಿ ಕಾರ್ಯಕ್ರಮ ನಡೆಯಲಿರುವ ಶ್ರೀ ವಾಲ್ಮೀಕಿ ಭವನದಲ್ಲಿ ಅಂತ್ಯವಾಯಿತು. ಪೌರಕಾರ್ಮಿಕರ ದಿನಾಚರಣೆ ಮೆರವಣಿಗೆಗೆ ಜಾನಪದ ಕಾಲ ಪ್ರಕಾರಗಳಾದ ಗೊರವರ ಕುಣಿತ ಮತ್ತು ಡೊಳ್ಳುಕುಣಿತ ನೃತ್ಯ ಕಳೆ ತುಂಬಿತು. ಪ್ರತಿಯೊಬ್ಬ ಪೌರಕಾರ್ಮಿಕರು ಹೊಸ ಬಟ್ಟೆ ತೊಟ್ಟು ಬಹಳ ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದರು.