ಹೊಸ ಮಡಿಕೆ ಚೀಲೂರಿನಲ್ಲಿ ಆಯೋಜಿಸಿದ್ದ ಭಕ್ತಿ ಸಮರ್ಪಣೆ ಕಾರ್ಯಕ್ರಮದಲ್ಲಿ ಸಿರಿಗೆರೆ ಮಠದ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಎಚ್.ಆರ್ ಬಸವರಾಜಪ್ಪ, ಧನಂಜಯ ಸರ್ಜಿ, ಪರಮೇಶ್ವರಪ್ಪ ಇತರರಿದ್ದರು. 
ಜಿಲ್ಲೆ

ಸಮಾಜದಲ್ಲಿ ಜಾತಿ ವೈಷಮ್ಯ ಹೆಚ್ಚಳ ಸರಿಯಲ್ಲ

ವಿಜಯವಾಣಿ ಸುದ್ದಿಜಾಲ ಹೊಳೆಹೊನ್ನೂರು

ಮತೀಯ ದುರ್ಭಾವನೆಗಳು ದಮನವಾಗಿ ಸರ್ವ ಜನಾಂಗಗಳು ಒಗ್ಗಟಿನ ಮಂತ್ರ ಜಪಿಸಬೇಕು ಎಂದು ಸಿರಿಗೆರೆ ಮಠದ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹೊಸ ಮಡಿಕೆ ಚೀಲೂರಿನಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 33ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹ ಕಾರ್ಯಕ್ರಮಕ್ಕೆ ಭಕ್ತಿ ಸಮರ್ಪಣೆ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿದರು.

ಹಳ್ಳಿಗಳಲ್ಲಿ ಮನೆ ಅಚ್ಚುಕಟ್ಟಾದರೆ ಸಾಲದು. ಮನೆಯಲ್ಲಿರುವ ಜನರ ಮನಸ್ಸುಗಳು ಸರಿಯಾಗಬೇಕು. ಅಂತರಂಗದ ಭಾವನೆಗಳ ಅಭಿವ್ಯಕ್ತಿ ಅನಾವರಣ ಮಾಡುವುದನ್ನು ಕಲಿಯಬೇಕು. ವ್ಯಕ್ತಿತ್ವದ ಹೊಗಳಿಕೆಗೆ ಶಬ್ಧಗಳು ಸೋಲುವಂತೆ ವ್ಯಕ್ತಿತ್ವ ನಿರ್ಮಾಣವಾಗಬೇಕು. ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದ ಹಿರಿಯ ಶ್ರೀಗಳು ಸ್ವಾತಂತ್ರ್ಯಪೂರ್ವದಲ್ಲಿ ಸಮುದಾಯಗಳ ಹೊಂದಾಣಿಕೆಯ ಸಹಪಂಕ್ತಿ ಭೋಜನ ನಡೆಸಿದ ಕೀರ್ತಿ ತರಳಬಾಳು ಮಠಕ್ಕೆ ಸಲ್ಲುತ್ತದೆ. ಸಮಾಜದಲ್ಲಿ ಜಾತಿ ವೈಷಮ್ಯ ಬೆಳೆಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದರು.

ದೇಶ, ವಿದೇಶದಲ್ಲಿ ಮಠದ ವಿದ್ಯಾರ್ಥಿಗಳು ಸಿಗುವುದು ಆಶಾದಾಯಕ ಬೆಳವಣಿಗೆ. ಗಣಕ ವಚನ ಸಂಪುಟ ಪ್ರತಿಯೊಬ್ಬರಿಗೂ ತಲುಪಬೇಕು. ಸಾಮಾಜಿಕ ಜಾಲತಾಣದ ಬೆರಳತುದಿಯಲ್ಲಿ ವಚನಗಳು ಲಭ್ಯವಿರುವಂತೆ ಮಾಡಲಾಗಿದೆ. ಮಕ್ಕಳಿಗೆ ವಚನಗಳ ಅರಿವಿರುವಂತೆ ಮಾಡಬೇಕು. ವಚನಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡುವ ಕೆಲಸ ಬರದಿಂದ ಸಾಗುತ್ತಿದೆ. ಪಾಶ್ಚಾತ್ಯ ದೇಶಗಳಲ್ಲಿ ಕನಡ ಭಾಷೆಯ ಅಧ್ಯಯನಗಳಿಗೆ ಅವಕಾಶ ಕಲ್ಪಿಸುವುದು ಆಶಾದಾಯಕ ಬೆಳವಣಿಗೆ ಎಂದರು.

ಆಂಗ್ಲ ಮಾಧ್ಯಮ ವ್ಯಾಮೋಹಕ್ಕೆ ಒಳಗಾಗಿ ಮಾತೃಭಾಷೆ ಮರೆಯಬಾರದು. ರೋಚಕ ಭಾಷಣಗಳಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಕೌಟುಂಬಿಕ ಸಂಬಂಧಗಳು ವಿಫಲವಾಗುತ್ತಿವೆ. ಎಲ್ಲ ವೇಳೆಯಲ್ಲೂ ಹಣವೇ ಮುಖ್ಯವಲ್ಲ ಎಂಬುದನ್ನು ಅರಿಯಬೇಕು. ಲೌಕಿಕ ತೊಳಲಾಟಗಳಿಗೆ ಬಲಿಯಾಗಿ ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿದೆ ಎಂದರು.

ಆಧ್ಯಾತ್ಮಿಕ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾಷೆ ಸೊಗಡನ್ನು ಆಸ್ವಾದಿಸುವುದನ್ನು ಮರೆಯಬಾರದು. ಮೇಲು ಕೀಳೆಂಬ ಭಾವನೆಗಳನ್ನು ಸಾಧ್ಯವಾದಷ್ಟು ತೊಡೆದುಹಾಕಬೇಕು. ಮನಸಿನಲ್ಲಿ ಹುದುಗಿರುವ ಕುರುಡು ನಂಬಿಕೆಗಳಿಗೆ ಆದಷ್ಟು ಮುಕ್ತಿ ನೀಡಬೇಕು. ವೌಢ್ಯಾಚರಣೆಗೆ ಬಲಿಯಾಗಿ ಸಂಸಾರಗಳು ಅವನತಿಗೆ ಸರಿಯಬಾರದು. ಮನಸಿನಲ್ಲಿ ಒಳಪು ಬರುವಂತೆ ಛಲದಿಂದ ಬದುಕಬೇಕು. ಮುಂದಿನ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದೆ ಶ್ರದ್ಧೆ, ಭಕ್ತಿಯಿಂದ ಬೆಳೆಯುವಂತಾಗಬೇಕು. ಮುಂದಿನ ಭಕ್ತಿ ಸಮರ್ಪಣೆ ಕಾರ್ಯಕ್ರಮವನ್ನು ಅಬ್ಬಲಗೆರೆಯಲ್ಲಿ ನಡೆಸಲಾಗುವುದು ಎಂದರು.

ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್, ಕೆ.ಸಿ ಸತೀಶ್ ಶೆಟ್ಟಿ, ಎಚ್.ಪರಮೇಶ್ವರಪ್ಪ, ಶಿವರಾಜ್, ಕಲ್ಯಾಣಪ್ಪ, ತೀರ್ಥಪ್ಪ, ಛಾಯಪ್ಪಗೌಡ, ಹೊಳಲೂರು ಸಂತೋಷ್, ಮಂಗೋಟೆ ರುದ್ರೇಶ್, ಎಚ್.ಬಸಪ್ಪ, ಎಚ್.ಜಿ.ಮಲ್ಲಯ್ಯ, ಎಚ್.ಎಲ್.ಷಡಾಕ್ಷರಿ, ನಾಗೇಂದ್ರಮ್ಮ, ಇಸ್ರೇಲ್ ಪ್ರಜೆ ಡಾ. ಗೀಲ್ ಇತರರಿದ್ದರು.

ದುಶ್ಚಟಗಳ ಹೆಚ್ಚಳ ಆತಂಕಕಾರಿ

ಬಹುತೇಕ ಗ್ರಾಮಗಳಲ್ಲಿ ಶಿವ ಹಾಗೂ ಪಾರ್ವತಿ ದೇವಸ್ಥಾನಗಳು ಬೇರೆ ಬೇರೆಯಾಗಿಯೇ ನಿರ್ಮಿಸಲಾಗಿದೆ. ನಾವುಗಳೇ ಶಿವ ಪಾರ್ವತಿಯರನ್ನು ದೂರ ಮಾಡುವುದು ಯಾವ ನ್ಯಾಯ?, ದೇವರುಗಳಿರುವಂತೆ ಸತಿಪತಿಗಳು ಬೇರೆ ಬೇರೆಯಾದರೆ ಸಂಸಾರಗಳ ಕಥೆ ಏನಾಗಬೇಡ. ಹಳ್ಳಿಗಳಲ್ಲಿ ಮನೆಗಳಿಗೆ ಅತ್ಯಾಧುನಿಕ ಸ್ಪರ್ಶ ನೀಡುತ್ತಿರುವ ಜನರು ಹೆಚ್ಚೆಚ್ಚು ದುರಾಭ್ಯಾಸಗಳನ್ನು ಮೈಗೂಡಿಸಿಕೊಂಡು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಳವಳದ ಸಂಗತಿ ಎಂದು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಶಿವಮೊಗ್ಗದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಹನಸವಾಡಿ ಶಾಲೆ ಜಿರ್ಣೋದ್ಧಾರ, ಸೂಗೂರಿನಲ್ಲಿ ಕಲ್ಯಾಣ ಮಂಟಪಕ್ಕೆ ಆಧುನಿಕ ಸ್ಪರ್ಶ, ಹರಮಘಟ್ಟದಲ್ಲಿ ನರ್ಸರಿ ಶಾಲೆ ಆರಂಭಿಸಲಾಗಿದೆ. ರಾಜ್ಯಾದ್ಯಂತ ಅಗತ್ಯವಿರುವ ಮಠದ 362 ಶಾಲಾ ಕಾಲೇಜುಗಳ ಕಟ್ಟಡಗಳು ನವೀಕರಣಗೊಳ್ಳುತ್ತಿವೆ. ಕೈಮರದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ 3 ಎಕರೆ ಜಮೀನನ್ನು ಖರಿದೀಸಿ ಸಮಾಜದ ಉದ್ಧಾರಕ್ಕಾಗಿ ಬಳಸಿಕೊಳ್ಳಲಾಗುತ್ತದೆ.

ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಮಠ, ಸಿರಿಗೆರೆ

ಅನ್ನ ಹಂಚಿದರೆ ಧನ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ ಬಹುಮುಖ್ಯ. ದೇಶದ ಸಂಸ್ಕೃತಿ ನಾಶವಾದರೆ ನಾಡುಗಳೆ ನಶಿಸಿಹೋಗುತ್ತವೆ. ಪಾಲಕರು ಮಕ್ಕಳಿಗೆ ಅಕ್ಷರಾಭ್ಯಾಸದೊಂದಿಗೆ ಸಂಸ್ಕಾರ ಕಲಿಸುವುದನ್ನು ಮರೆಯಬಾರದು. ಮಠಗಳ ಜೋಳಿಗೆ ತುಂಬಿದರೆ ಭಕ್ತರ ಹೊಟ್ಟೆ ತುಂಬುತ್ತದೆ. ಸಾರ್ಥಕ ಇಲ್ಲದ ಜೀವನ ನಮ್ಮದಾಗಬಾರದು. ಧರ್ಮಮಾರ್ಗದಲ್ಲಿ ನಡೆಯಬೇಕು.

ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ

ಗ್ರಾಮಾಂತರದಲ್ಲಿ ಶಾಲೆ ತೆರೆದು ಅಕ್ಷರ ದಾಸೋಹ ಉಣಬಡಿಸಿದ ಕೀರ್ತಿ ಸಿರಿಗೆರೆಯ ಹಿರಿಯ ಶ್ರೀಗಳಿಗೆ ಸಲ್ಲುತ್ತದೆ. ನೀರಾವರಿ ವಿಚಾರದಲ್ಲಿ ಬಯಲು ಸೀಮೆಯನ್ನು ಮಲೆನಾಡು ಮಾಡಿದ್ದಾರೆ. ಸರ್ಕಾರದಿಂದ ಬಿಡಿಗಾಸು ಅನುದಾನ ಪಡೆಯದ ತರಳಬಾಳು ಮಠ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿ ಜನಮನ್ನಣೆ ಗಳಿಸಿದೆ. ಶಿವಶರಣರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಎಚ್.ಅರ್.ಬಸವರಾಜಪ್ಪ, ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷ