ಜಿಲ್ಲೆ

ಸಮಾಜದಲ್ಲಿ ಕುಸಿಯುತ್ತಿರುವ ಸಂಬಂಧಗಳ ಮೌಲ್ಯ:ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶ್‌ಗೌಡ ಕಳವಳ

ಹಾಸನ: ಯುವಕ- ಯುವತಿಯರಲ್ಲಿ ಮಾನವೀಯ ಗುಣಗಳನ್ನು ಬೆಳೆಸದೆ ಇರುವುದರಿಂದ ಇಂದು ಸಮಾಜದಲ್ಲಿ ಸಂಬಂಧಗಳ ಮೌಲ್ಯ ಕುಸಿಯಲು ಕಾರಣವಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್‌ಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಎಸ್. ತಿಮ್ಮನಹಳ್ಳಿ ಗ್ರಾಮದಲ್ಲಿ ನಗರದ ಆರ್.ಸಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ (ಗಂಧದ ಕೋಠಿ) ಕಾಲೇಜಿನ ವತಿಯಿಂದ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಬದಲಾದ ಜಾನಪದ ಜಗತ್ತು ಎಂಬ ವಿಷಯವಾಗಿ ಗುರುವಾರ ಸಂಜೆ ಉಪನ್ಯಾಸ ನೀಡಿದ ಅವರು, ಹಳ್ಳಿಗಳು ಇಂದು ಸಂಪೂರ್ಣ ಬದಲಾಗಿದ್ದು, ಜನರೂ ಬದಲಾಗಿದ್ದಾರೆ. ಕಳೆದ ಐವತ್ತು ವರ್ಷಗಳ ಹಿಂದೆ ಗ್ರಾಮೀಣ ಭಾಗದ ಜನರಲ್ಲಿ ಇದ್ದ ನೆಮ್ಮದಿ, ಸಂಬಂಧಗಳು ಇಂದು ಇಲ್ಲವಾಗಿದೆ. ಹಳ್ಳಿಗಳಲ್ಲಿ ಅಂದು ಮೂಲಭೂತ ಸೌಲಭ್ಯಗಳು ಇರಲಿಲ್ಲ. ಆದರೆ ನೆಮ್ಮದಿ, ಸಹಕಾರ ಮನೋಭಾವ, ಪ್ರೀತಿ, ವಿಶ್ವಾಸ ಹಾಗೂ ಸಂಬಂಧಗಳಿಗೆ ಬೆಳೆ ಇರುತ್ತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಇಂದು ಅವುಗಳು ಯಾವುವೂ ಉಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಯುವ ಸಮೂಹವನ್ನು ನಾವು ಸರಿಯಾಗಿ ಬೆಳೆಸುವಲ್ಲಿ ವಿಫಲರಾಗುತ್ತಿದ್ದೇವೆ. ಹಿಂದೆ ಮಾನವೀಯ ಗುಣಗಳನ್ನು ಕಲಿಸುವುದರ ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುವುದನ್ನು ಕಲಿಸುತ್ತಿದ್ದರು. ಆದರೆ ಇಂದು ಕೇವಲ ಪಠ್ಯದ ಶಿಕ್ಷಣಕ್ಕೆ ಸೀಮಿತವಾಗಿ ಮಕ್ಕಳನ್ನು ಬೆಳೆಸುತ್ತಿರುವುದರಿಂದ ಯುವಕ-ಯುವತಿಯರಲ್ಲಿ ಮಾನವೀಯ ಗುಣಗಳು ಇಲ್ಲದಂತಾಗುತ್ತಿವೆ. ಸಮಾಜದಲ್ಲಿ ಯಾವುದೇ ಸಂಬಂಧಗಳಿಗೆ ಬೆಲೆ ಕೊಡದಂತಾಗಿದೆ. ಮಕ್ಕಳಿಗೆ ನಾವು ಸಂಸ್ಕಾರ, ವಿನಯ, ವಿದ್ಯೆ, ಬುದ್ದಿಯನ್ನು ಹೇಳಿಕೊಟ್ಟಲ್ಲಿ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಕಾಲೇಜುಗಳಲ್ಲಿ ನಡೆಯುವ ಈ ತೆರನಾದ ಶಿಬಿರಗಳು ಯುವಕರಿಗೆ ಉತ್ತಮ ಗುಣಗಳನ್ನು ಹೇಳಿಕೊಡಲಿದ್ದು, ಇದರ ಉಪಯೋಗವನ್ನು ಯುವಕ-ಯುವತಿಯರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಎಸ್.ಎಚ್. ಗಂಗೇಗೌಡ ಮಾತನಾಡಿ, ಯುವ ಸಮೂಹ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ದೇಶದಲ್ಲಿ ಇನ್ನು ಸಾಕಷ್ಟು ಗ್ರಾಮಗಳ ಜನರಲ್ಲಿ ಸಾಮಾಜಿಕ, ಆರ್ಥಿಕ ಅರಿವು ಇಲ್ಲದೆ, ಜನರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಯುವಕರು ಒಂದು ವಾರ ನಡೆಯುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಗ್ರಾಮದಲ್ಲಿ ಸ್ವಚ್ಛತೆ ಮಾಡುವುದರ ಮೂಲಕ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಬೇಕು. ವಿದ್ಯಾಭ್ಯಾಸದೊಂದಿಗೆ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುವ ಮೂಲಕ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಕಾಲೇಜಿನ ಅಧ್ಯಾಪಕಿ ಎಂ.ವಿ. ಹೇಮಾವತಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಒಂದು ವಾರ ನಡೆಯುವ ಈ ಎನ್‌ಎಸ್‌ಎನ್ ಶಿಬಿರವನ್ನು ಗ್ರಾಮೀಣ ಭಾಗದ ಜನರ ಸಹಕಾರದಿಂದ ಯಶಸ್ವಿಯಾಗಿ ನಡೆಸಬೇಕಾಗಿದೆ. ಯುವಕರು ವಿದ್ಯಾಭ್ಯಾಸದ ಅವಧಿಯಲ್ಲಿ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿ.ಪಂ. ನಿವೃತ್ತ ಅಧಿಕಾರಿ ನಾಗರಾಜ್, ಎಪಿಎಂಸಿ ನಿರ್ದೇಶಕ ಮಂಜುನಾಥ್, ಎನ್‌ಎಸ್‌ಎಸ್ ಶಿಬಿರಾಧಿಕಾರಿ ಡಾ.ಸಿ.ಎಲ್. ಶಿವಕುಮಾರ್, ಸಹ ಶಿಬಿರಾಧಿಕಾರಿ ಜಿ. ಸುನೀತಾ, ನಿವೃತ್ತ ಎನ್‌ಎಸ್‌ಎಸ್ ಅಧಿಕಾರಿ ಸಿ.ಎಸ್. ಮೋಹನ, ಉಪನ್ಯಾಸಕರಾದ ಎಚ್.ಕೆ. ದಿಲೀಪ್ ಕುಮಾರ್, ತಿಮ್ಮಶೆಟ್ಟಿ, ರಮೇಶ್ ಹಮಿನಿ, ಪಿ. ರವಿಕುಮಾರ್, ಹಿರಿಯ ಸ್ವಯಂ ಸೇವಕರಾದ ದಿಲೀಪ್, ಚಂದ್ರಿಕಾ ಹಾಗೂ ಇತರರು ಹಾಜರಿದ್ದರು.