ಜಿಲ್ಲೆ

ಸಮಾಜದಲ್ಲಿ ಒಗ್ಗಟ್ಟಿರಲಿ ಅಪಸ್ವರ ಬೇಡ

ಚಿತ್ರದುರ್ಗ: ಯಾವ ಪಕ್ಷದಲ್ಲಿ ಆದ್ರೂ ಇರ್ರಿ. ಚುನಾವಣೆ ವೇಳೆ ಮಾತ್ರ ರಾಜಕೀಯ ಮಾಡೋಣ. ಆದರೆ, ನಮ್ಮ ಸಮಾಜದ ಪ್ರಶ್ನೆ ಎದುರಾದಾಗ ಅಪಸ್ವರ ಬೇಡ. ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಮನವಿ ಮಾಡಿದರು.

ತರಾಸು ರಂಗಮಂದಿರದಲ್ಲಿ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಂವಿಧಾನ ತಿದ್ದುಪಡಿಯಿದ್ದಂತೆ. ಅದನ್ನು ಎಲ್ಲರೂ ಪಾಲಿಸಬೇಕು. ಮೂರು ದಶಕಗಳ ಹೋರಾಟಕ್ಕೆ ಗೊಂದಲ ಸೃಷ್ಟಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಜಾರಿಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತದೆ ಎಂದು ಎಚ್ಚರಿಸಿದರು.

ಮಾದಿಗ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇರುವುದು ನೋವಿನ ಸಂಗತಿ. ಸಂಘಟನೆ ಅಗತ್ಯವಾಗಿದ್ದು, ನ್ಯಾಯಯುತ ಹಕ್ಕುಗಳಿಗೆ ಹೋರಾಡಿ. ಸರ್ಕಾರದಿಂದ ಸಿಗುವ ಸೌಲಭ್ಯ ಪಡೆದುಕೊಳ್ಳಿ. ಮುಂದಿನ ಪೀಳಿಗೆ ತೊಂದರೆ ಅನುಭವಿಸಬಾರದು ಎಂದು ಸಲಹೆ ನೀಡಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಕಳೆದ 40 ವರ್ಷಗಳ ಹಿಂದೆ ಯಾರಿಗೆ ಬೇಕಾದರೂ ಸರ್ಕಾರಿ ನೌಕರಿ ಸಿಗುತ್ತಿತ್ತು. ಆದರೀಗ ಶಿಕ್ಷಣ, ಉದ್ಯೋಗದಲ್ಲಿ ಪ್ರಭಲ ಸ್ಪರ್ಧೆಯಿದೆ. ಒಳ ಮೀಸಲಾತಿ ಜಾರಿಯಿಂದ ಮಾತ್ರ ಸಮುದಾಯದವರಿಗೂ ನೌಕರಿ ಸಿಗಲು ಸಾಧ್ಯ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ತಡಮಾಡದೆ ಅನುಷ್ಠಾನಗೊಳಿಸಬೇಕು. ಅಲ್ಲಿಯವರೆಗೂ ಯಾವ ಹುದ್ದೆಗಳಿಗೂ ನೇಮಕಾತಿ ಮಾಡಬಾರದು ಎಂದು ಒತ್ತಾಯಿಸಿದರು.

ನಾನೂ ಸಚಿವನಾಗಿದ್ದಾಗ ಸರ್ಕಾರದಿಂದ 400 ವಸತಿ ಶಾಲೆ, 800 ವಿದ್ಯಾರ್ಥಿನಿಲಯ ನಿರ್ಮಿಸಿ ಅನುಕೂಲ ಮಾಡಿಕೊಟ್ಟಿದ್ದೇನೆ. ಬಡತನ, ಹಸಿವು ನಿವಾರಣೆಗೆ ಶಿಕ್ಷಣ ಅಸ್ತ್ರ ಎಂಬುದನ್ನು ಮಾದಿಗ ಸಮುದಾಯದ ಮಕ್ಕಳು ಮರೆಯಬಾರದು ಎಂದರು.

ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ತಿರಸ್ಕಾರ, ಶೋಷಣೆಗೆ ಒಳಗಾದವರಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಶಕ್ತಿ ತುಂಬಬೇಕಿದೆ ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ, ಉತ್ತರ ಪತ್ರಿಕೆಗಳು ಬಲಿಷ್ಠರ ಕೈಗೆ ಸಿಗುವ ಕಾರಣದಿಂದ ಮಾದಿಗ ಸಮುದಾಯದ ಮಕ್ಕಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಸಿಇಟಿಯಲ್ಲಿಯೂ ಭ್ರಷ್ಟಾಚಾರ. ಹೀಗಾಗಿ ಒಳಮೀಸಲಾತಿಯನ್ನು ಗಂಭೀರವಾಗಿ ಪರಿಗಣಿಸಿ ಹೋರಾಟಕ್ಕೆ ಇಳಿಯದಿದ್ದರೆ, ಮುಂದಿನ ದಿನಗಳಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಒಳಮೀಸಲಿಗೆ ಸದನದಲ್ಲಿ ದನಿ ಎತ್ತಿ: ಶ್ರೀ ಷಡಕ್ಷರ ಮುನಿ ಸ್ವಾಮೀಜಿ ನೇತೃತ್ವವಹಿಸಿ ಮಾತನಾಡಿ, ಮಾದಿಗ ಸಮುದಾಯದ ಎಲ್ಲ ಮಕ್ಕಳು ವಿದ್ಯಾವಂತರಾಗಬೇಕು. ಒಳಮೀಸಲಾತಿ ಜಾರಿಗಾಗಿ ರಾಜಕಾರಣಿಗಳು ಸದನದಲ್ಲಿ ದನಿ ಎತ್ತಬೇಕು. ರಾಜ್ಯ ಸರ್ಕಾರ ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿಗೆ ಮುಂದಾಗಲಾಗುವುದು ಎಂದು ತಿಳಿಸಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಸಹೋದರ ಸಮಾಜದವರು ಒಳ ಮೀಸಲಾತಿಯಿಂದ ಅನ್ಯಾಯ ಆಗಲಿದೆ ಎನ್ನುವುದರಲ್ಲಿ ಅರ್ಥವಿಲ್ಲ. ಜಾರಿಯಿಂದ ಖಂಡಿತ ಒಳ್ಳೆಯದಾಗಲಿದೆ. ಇದನ್ನು ಅರ್ಥ ಮಾಡಿಸಬೇಕಿದೆ ಎಂದು ಹೇಳಿದರು.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಮಾದಿಗರ ಸಂಘಟನೆ ಕ್ಷೀಣಿಸುತ್ತಿದೆ. ಸಮುದಾಯದ ರಾಜಕಾರಣಿಗಳ ಶಕ್ತಿ ಮಾದಿಗರ ಉದ್ಧಾರಕ್ಕೆ ಬಳಕೆಯಾಗಬೇಕಿದೆ. ಒಳ ಮೀಸಲಾತಿ ಜಾರಿಯಾಗುವ ವಿಶ್ವಾಸವಿದೆ ಎಂದರು.

ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸನ್, ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜು, ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಕೆ.ಜಿ.ಜಗದೀಶ್, ಪಂಚಾಯತ್ ರಾಜ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಲ್.ಹನುಮಂತಪ್ಪ, ನಿವೃತ್ತ ಅಧಿಕಾರಿಗಳಾದ ಎಂ.ರೇವಣಸಿದ್ದಪ್ಪ, ಪಿ.ಜಯಣ್ಣ, ಜಿ.ಆರ್.ದೇವರಾಜ್, ಡಿ.ಟಿ.ಜಗನ್ನಾಥ್, ಬಿ.ಎಸ್.ಪುರುಷೋತ್ತಮ್, ಜಿಲ್ಲಾಸ್ಪತ್ರೆಯ ಡಾ.ಸತೀಶ್, ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಇತರರಿದ್ದರು.