ಜಿಲ್ಲೆ

ಸಮಾಜದ ಸ್ವಾಸ್ಥ್ಯ ಕಾಪಾಡುವಂಥ ಕಾವ್ಯ ರಚನೆಯಾಗಲಿ

ಬೀದರ್: ಕಾವ್ಯಗಳು ವೈಯಕ್ತಿಕ ಹಿತಾಸಕ್ತಿಗಾಗಿ, ಒಬ್ಬರನ್ನು ಸಂತುಷ್ಟಪಡಿಸಲು, ಪ್ರಶಸ್ತಿ ಗಿಟ್ಟಿಸಲು ಅಥವಾ ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವಂತಿರಬಾರದು. ಸಮಾಜದ ಸ್ವಾಸ್ಥ್ಯ ಕಾಪಾಡುವಂಥ ಹಾಗೂ ಹೊಸ ಸಮಾಜ ನಿರ್ಮಾಣ ಮಾಡುವಂಥ ಕಾವ್ಯ ರಚನೆ ಆಗಬೇಕು ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವುರ ಹಾಗೂ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಸಹಯೋಗದಡಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಬಹುಭಾಷಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಪಾತ್ರ ಬಹಳಷ್ಟಿದೆ. ಸಾಮಾಜಿಕ ಬದುಕು ಹಾಗೂ ರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾವ್ಯ ನಿಲ್ಲಬೇಕು. ಪೂರ್ವಜರು ಬಳುವಳಿಯಾಗಿ ಬಿಟ್ಟು ಹೋದ ಜಾನಪದ ಕಲೆ ಹಾಗೂ ಸಂಸ್ಕೃತಿ ಇಂದಿನ ಪೀಳಿಗೆಗೆ ಮನ ಮುಟ್ಟುವಂತೆ ತಿಳಿಸಬೇಕಿದೆ ಎಂದರು.

ಕಾವ್ಯಗಳು ನಮ್ಮ ವೈಯಕ್ತಿಕ ಹಾಗೂ ವೈಚಾರಿಕ ಘನತೆ ಹೆಚ್ಚಿಸುವಂತಿರಬೇಕು. ಜಾತಿ, ಧರ್ಮ, ಭಾಷೆ, ಪ್ರಾಂತ್ಯ, ಭಾವನೆಗಳಿಗೆ ಧಕ್ಕೆ ತರದಂಥ ಕಾವ್ಯಗಳ ಅಗತ್ಯವಿದೆ. ಕಲ್ಪಿತ ಹಾಗೂ ಸಮಾಜದಲ್ಲಿ ವಿಷಬೀಜ ಬಿತ್ತುವಂಥ ಕಾವ್ಯಗಳಿಗೆ ಗೌರವ ಕೊಡಬಾರದು. ಒಬ್ಬರನ್ನು ದ್ವೇಷಿಸಿ ಮತ್ತೊಬ್ಬರನ್ನು ಅಟ್ಟಕ್ಕೇರಿಸುವ ಕಾವ್ಯ ರಚನೆ ದೇಶದ್ರೋಹದ ಕಾರ್ಯಕ್ಕೆ ಸಮಾನ ಎಂದು ಪ್ರತಿಪಾದಿಸಿದರು.

ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಬಸವರಾಜ ಡೋಣೂರ, ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿದರು. ಕನರ್ಾಟಕ ಸಾಹಿತ್ಯ ಸಂಘದ ಉಪಾಧ್ಯಕ್ಷ ಪ್ರೊ.ಎಸ್.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರೀಯ ವಿವಿ ಶಾಸೀಯ ವಿಭಾಗದ ಮುಖ್ಯಸ್ಥ ಡಾ.ಬಿ.ವಿ. ಪೂಜಾರಿ, ಸಂಘದ ಟ್ರಸ್ಟ್ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ ಇತರರಿದ್ದರು. ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಡಾ.ಸುನೀತಾ ಕೂಡ್ಲಿಕರ್, ಡಾ.ಸಿರಾಜೊದ್ದೀನ್ ನಿರೂಪಣೆ ಮಾಡಿದರು. ನಿಜಲಿಂಗಪ್ಪ ತಗಾರೆ ವಂದಿಸಿದರು.

ಅಂತಾರಾಷ್ಟ್ರೀಯ ಜಾನಪದ ಸಮ್ಮೇಳನ
ನವೆಂಬರ್ ಅಥವಾ ಡಿಸೆಂಬರ್ನಲ್ಲಿ ವಿಶ್ವ ಜಾನಪದ ಸಮ್ಮೇಳನ ಬೀದರ್ನಲ್ಲಿ ಆಯೋಜಿಸಲಾಗುತ್ತಿದೆ ಎಂದು ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಹೇಳಿದರು. ಸಮ್ಮೇಳನದಲ್ಲಿ 15 ಸಾವಿರ ದೇಶದ ಹಾಗೂ ಒಂದೂವರೆ ಸಾವಿರ ವಿದೇಶಿ ಕಲಾವಿದರು ಭಾಗವಹಿಸಲಿದ್ದು, ಸಿದ್ಧತೆ ಕಾರ್ಯ ಆರಂಭಿಸಲಾಗಿದೆ. ಜಾನಪದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನ ಪೂರಕವಾಗಲಿದೆ ಎಂದರು. ಬೀದರ್ ತೆಲಂಗಾಣ ಹಾಗೂ ಮಹಾರಾಷ್ಟ್ರದ ಗಡಿ ನಡುವೆ ಇರುವ ಕಾರಣ 25 ಕೋಟಿ ವೆಚ್ಚದಲ್ಲಿ ಸಾಂಸ್ಕೃತಿಕ ಹಬ್ ಸ್ಥಾಪಿಸಲು ಕೇಂದ್ರ ಸಕರ್ಾರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಖೂಬಾ ಸಕರ್ಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ಭಾಷೆಗಳ ಸಮ್ಮಿಲನದಿಂದ ಭಾವ್ಯಕ್ಯತೆ ಸಾಧ್ಯ
ಭಾಷೆಗಳ ಸಮ್ಮಿಲನದಿಂದ ಭಾವನೆಗಳು ಹತ್ತಿರವಾಗಿ ಭಾವ್ಯಕ್ಯತೆಗೆ ಕಾರಣವಾಗುತ್ತವೆ ಎಂದು ಹಿರಿಯ ಸಾಹಿತಿ ಡಾ.ಕಾಶೀನಾಥ ಅಂಬಲಗಿ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಬಹುಭಾಷಾ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ನೂರಾರು ಭಾಷೆಗಳಿವೆ. ಸಾವಿರಾರು ಕವಿಗಳು ತಮ್ಮದೇ ಆದ ಧಾಟಿಯಲ್ಲಿ ಕವನ ರಚಿಸುವುದರ ಜತೆಗೆ ಹಾಡುವಾಗ ಅನ್ಯ ಭಾಷಿಕರಿಗೆ ಅರ್ಥವಾಗದಿದ್ದರೂ ಅದರಲ್ಲಿನ ಭಾವನೆಗಳು ತಿಳಿಯುತ್ತವೆ. ಇದೇ ಭಾರತೀಯರ ನಿಜವಾದ ಗುಣ ಎಂದು ಹೇಳಿದರು. ಪ್ರೊ.ದೇವೇಂದ್ರ ಕಮಲ ಮಾತನಾಡಿ, ಬಹುತೇಕ ಕವಿಗಳು ತಮ್ಮ ವೈಯಕ್ತಿಕ ಬದುಕು ಆಧರಿಸಿ ಕವನ ರಚಿಸುತ್ತಾರೆ. ಕೆಲವೊಮ್ಮೆ ಅದು ಸಮಾಜ ಹಾಗೂ ಸಾಂಸ್ಕೃತಿಕ ಜಗತ್ತಿಗೂ ಸಹಕಾರಿಯಾಗುತ್ತದೆ. ಕಾಲಕ್ಕೆ ತಕ್ಕಂತೆ ಕಾವ್ಯ ರಚನೆಯಾದರೆ ಸಮಾಜದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಕಾಣುತ್ತದೆ ಎಂದರು. ಸಾಹಿತಿ ಡಾ.ವಿಶಾಲಾಕ್ಷಿ ಕರಡಿ ಇದ್ದರು. ಓಡಿಶಾದ ರವೀಂದ್ರನಾಥ ಪಂಡಿತ, ಭಾರತಿ ಲಕ್ಷ್ಮೀಪಾಲ, ತಮಿಳುನಾಡಿನ ಡಾ.ಬಾಬು ಎನ್., ಡಾ.ರಾಜಶೇಖರನ್ ಎಲ್., ಕೇರಳದ ಪ್ರೊ.ಎಂ.ಎ. ಮಹ್ಮದ್ ಅಸ್ಲಂ, ಬಿಹಾರದ ಡಾ.ಇನಾಮುಲ್ ಆಜಾದ್, ರಾಜ್ಯದ ಡಾ.ಶೀತಲ್ ಪ್ರಶಾಂತ, ಪ್ರೊ.ಬಸವರಾಜ ಡೋಣೂರ, ಡಾ.ಮಂಜುನಾಥ, ಎಂ.ಜಿ. ಗಂಗನಪಳ್ಳಿ, ವೀರಶೆಟ್ಟಿ ಮೈಲೂರಕರ್, ಡಾ.ಶಿರಾಜುದ್ದೀನ್, ಸಂಜುಕುಮಾರ ಜುಮ್ಮಾ, ತೆಲಂಗಾಣದ ವೈ. ರಾಘವೇಂದ್ರರಾವ್, ಆಂಧ್ರಪ್ರದೇಶದ ಡಾ.ಜಿ. ವೆಂಕಟಕೃಷ್ಣ ಇತರರು ಕವನ ವಾಚನ ಮಾಡಿದರು. ಡಾ.ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಡಾ.ಮಹಾನಂದಾ ಮಡಕಿ ನಿರೂಪಣೆ ಮಾಡಿದರು. ಡಾ.ಸುನೀತಾ ಕೂಡ್ಲಿಕರ್ ವಂದಿಸಿದರು.