ಜಿಲ್ಲೆ

ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಫ್ಲೆಕ್‌ನ್ನು ತೆರವುಗೊಳಿಸುವಂತೆ ಮನವಿ

ಹಾಸನ: ನಗರದಾದ್ಯಂತ ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಫ್ಲೆಕ್‌ನ್ನು ಅಳವಡಿಸಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದರು ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಭಾರತೀಯರು ಯಾವುದೇ ಹಬ್ಬಗಳನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಹಬ್ಬಗಳು ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯ ಮತ್ತು ಸೌಹಾರ್ದತೆ ಹಾಗೂ ಸಹಬಾಳ್ವೆಯ ಪ್ರತೀಕಗಳಾಗಿವೆ. ಆದರೆ ಕೋಮುವಾದಿ ಶಕ್ತಿಗಳು ಹಿಂದೂ ಸಾಮ್ರಾಜ್ಯ, ಘರ್ಜಿಸಿ ಹೇಳು ನಾನೊಬ್ಬ ಹಿಂದೂ ಎನ್ನುವಂತಹ ಘೋಷವಾಕ್ಯ ವಿರುವ ಫ್ಲೆಕ್ಸ್‌ಗಳು ನಗರದಲ್ಲಿ ಅಳವಡಿಸುವ ಮೂಲಕ ಧರ್ಮವನ್ನು ಗುರಿಯಾಗಿಸಿಕೊಂಡು ಸಮಾಜಘಾತುಕ ಕೋಮು ಪ್ರಚೋದನೆಕಾರಿ ಫ್ಲೆಕ್ಸ್‌ಗಳನ್ನು ಅಳವಡಿಸಿ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಇಷ್ಟೊಂದು ದೊಡ್ಡದೊಡ್ಡ ಕೋಮುಪ್ರಚೋದನಾಕಾರಿ ಫ್ಲೆಕ್ಸ್‌ಗಳನ್ನು ಅಳವಡಿಸಲು ನಗರಸಭೆ ಮತ್ತು ಜಿಲ್ಲಾಡಳಿತ ಹೇಗೆ ಅನುಮತಿ ನೀಡಿದೆ ಎನ್ನುವುದೇ ಪ್ರಶ್ನೆಯಾಗಿದೆ. ಒಂದು ನಿರ್ಧಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡು ಹಾಕಿರುವ ಇಂತಹ ಸಮಾಜ ಘಾತುಕ ಕೋಮು ಪ್ರಚೋಧನಾಕಾರಿ ಘೋಷಣೆಗಳುಳ್ಳ ಫ್ಲೆಕ್ಸ್‌ಗಳು ಪ್ರಜಾಪ್ರಭುತ್ವ , ಸಂವಿಧಾನ, ಜಾತ್ಯಾತೀತಕ್ಕೆ ದೇಶಕ್ಕೆ ವಿರುದ್ಧವಾಗಿವೆ. ಕೂಡಲೇ ನಗರಸಭೆ, ಪೋಲೀಸು ಇಲಾಖೆ ಮತ್ತು ಜಿಲ್ಲಾಡಳಿತವು ದೇಶದ ಐಕ್ಯತೆಗೆ ದಕ್ಕೆ ತರುವ ಇಂತಹ ಫ್ಲೆಕ್ಸ್ ಗಳನ್ನು ತೆರವುಗೊಳಿಸಿ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ಹಾಸನಾಂಭ ಕಲಾಕ್ಷೇತ್ರದ(ಕಲಾಭವನ) ಆವರಣದಲ್ಲಿ. ಕೆಲವು ಕೋಮುವಾದಿ ಶಕ್ತಿಗಳು ಹಿಂದೂ ಗಣಪತಿ ಪ್ರತಿಷ್ಠಾಪನೆ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ(ಎಂ) ಧರ್ಮೇಶ್, ದಲಿತ ಮುಖಂಡರಾದ ಎಚ್.ಕೆ. ಸಂದೇಶ್, ಸೋಮಶೇಖರ್, ವಿಜಯಕುಮಾರ್, ಎಚ್.ಆರ್.ನವೀನ್ ಕುಮಾರ್, ಎಂ.ಜಿ.ಪೃಥ್ವಿ, ಮುಬಷಿರ್ ಅಹಮದ್,ದೇವರಾಜ್, ಸತ್ಯನಾರಾಯಣ, ಅರವಿಂದ್ ಇತರರು ಇದ್ದರು.