ಕಾಗವಾಡ: ಅನಾದಿ ಕಾಲದಿಂದಲೂ ಸಮಾಜದ ಶ್ರೇಯೋಭಿವೃದ್ಧಿಗೆ ಧರ್ಮ ಜ್ಯೋತಿ ಬೆಳಕಾಗಿದೆ. ಪ್ರತಿಯೊಬ್ಬರೂ ಬದುಕಿನ ಅಂಧಕಾರ ಕಳೆದು ಹೊಸ ಚೈತನ್ಯ ಮೂಡಿಸುವ ಧಾರ್ಮಿಕ ಸತ್ಸಂಗಗಳಲ್ಲಿ ಪಾಲ್ಗೊಳ್ಳಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕುಸನಾಳ-ಮೊಳವಾಡ ಗ್ರಾಮದ ಸೀಮೆಯಲ್ಲಿರುವ ಶ್ರೀ ವಿಠ್ಠಲ ರುಕ್ಮೀಣಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಬಪ ಕೃಷ್ಣಾ ಮಹಾರಾಜ (ಇಂಗಳಿಕರ) ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವ ಹಾಗೂ ಶ್ರೀ ಜ್ಞಾನೇಶ್ವರ ಪಾರಾಯಣ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಕವಲಗುಡ್ಡ-ಹಣಮಾಪುರ ಸಿದ್ಧಾಶ್ರಮದ ಸಿದ್ಧಯೋಗಿ ಅಮರೇಶ್ವರ ಸ್ವಾಮೀಜಿ ಮಾತನಾಡಿ, ಇಂದಿನ ಮಕ್ಕಳು ಬುದ್ಧಿವಂತರಾಗುವುದಕ್ಕಿಂತ ಹೃದಯವಂತರಾಗುವುದು ಮುಖ್ಯವಾಗಿದೆ. ಭಾರತೀಯ ಸಂಸ್ಕೃತಿ ಮರೆಯಾಗುತ್ತಿರುವ ಪರಿಣಾಮ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ನಂದಿಕುರಳಿಯ ವೀರಭದ್ರೇಶ್ವರ ಸ್ವಾಮೀಜಿ, ಬಾವನಸೌಂದತ್ತಿಯ ಶಿವಶಂಕರ ಸ್ವಾಮೀಜಿ, ಮಾಂಜರಿಯ ಹಬಪ ಬಾಬಾಸಾಹೇಬ ಬಿಸಲೆ ಮಹಾರಾಜರು, ಜ್ಞಾನೇಶ್ವರ ಮಹಾರಾಜರು, ಸುಭಾಷ ಶೇವಾಳೆ ಮಹಾರಾಜರು ಆಶೀರ್ವಚನ ನೀಡಿದರು.
ಪಂಡರಪುರದ ಹಬಪ ನಾವದೇವ ವಾಸಕರ ಮಹಾರಾಜರು 5,001 ಭಕ್ತರಿಗೆ ಗ್ರಂಥರಾಜ ಶ್ರೀ ಜ್ಞಾನೇಶ್ವರ ಪಾರಾಯಣ ಪಠಣ ಮಾಡಿಸಿದರು. ಅಲಬಾಳದ ಶರಣಶ್ರೀ ಅಮಸಿದ್ಧ ಒಡೆಯರು, ಮಾಜಿ ಶಾಸಕ ಮೋಹನ ಶಹಾ, ಉಗಾರ ಸಕ್ಕರೆ ಕಾರ್ಖಾನೆ ಎಂಡಿ ಚಂದನ ಶಿರಗಾಂವಕರ, ಕೆ.ಎಸ್.ಚೌಗುಲೆ, ವೈ.ಎಸ್. ಕೊಟ್ನಿಸ್, ಬಾಬುರಾವ್ ಮೆಂಡಿಗೇರಿ, ಎಸ್.ಬಿ.ಸೂರ್ಯವಂಶಿ, ವಿಕ್ರಾಂತ ಗುಂಡೇವಾಡಿ, ಶಿವಾನಂದ ಪಾಟೀಲ ಇತರರಿದ್ದರು. ಪದ್ಮರಾಜ ಅಳಪ್ಪನವರ ಪ್ರಾರ್ಥಿಸಿದರು. ರಾಹುಲ ಕೊಕಣೆ, ಮನೋಜ ನಾಂದಣಿ ನಿರೂಪಿಸಿದರು. ಮಾರುತಿ ಜಾಧವ ವಂದಿಸಿದರು.