ಕೂಡ್ಲಿಗಿ: ಗ್ರಾಮೀಣ ಜನರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಬೇಕಾದರೆ ಶಿಕ್ಷಣ ಅತಿ ಅವಶ್ಯ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಗೋವಿಂದಗಿರಿ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಕ್ಷೇತ್ರದಲ್ಲಿ ಬಹುತೇಕ ಹಿಂದುಳಿದ ಜಾತಿಯವರು ಹೆಚ್ಚಾಗಿ ವಾಸಿಸುತ್ತಿದ್ದು, ಅವರೆಲ್ಲ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಬಹುದೊಡ್ಡ ಅಸ್ತ್ರವಾಗಿದೆ ಎಂದರು.
ಶಿಕ್ಷಣದಿಂದ ವಂಚಿತರಾಗಿ ಕಳೆದ 60 ವರ್ಷಗಳಿಂದ ಬಡತನದಲ್ಲಿ ಕಳೆಯುವಂತಾಗಿದೆ. ಇಡೀ ಕುಟುಂಬವೇ ಕೂಲಿ ಅರಸಿ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುತ್ತಿರುವುದು ದುರಂತವೇ ಸರಿ. ಅನೇಕ ಹಟ್ಟಿಗಳಲ್ಲಿ ಶಿಕ್ಷಣವಿಲ್ಲದೆ ಜನರು ಬಾಲ್ಯ ವಿವಾಹ ಸೇರಿದಂತೆ ಅನೇಕ ಮೌಢ್ಯಗಳಿಗೆ ಬಲಿಯಾಗುತ್ತಿದ್ದಾರೆ. ಇದನ್ನು ಮನಗಂಡು ನಾನು ಕ್ಷೇತ್ರದಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇನೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ 250 ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಿಸಿ, ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲು ಕೋಟ್ಯಂತರ ರೂ. ನೀಡಿರುವೆ. ಅನೇಕ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಮೂಲ ಸೌಕರ್ಯ ಒದಗಿಸಿದ್ದೇ. ಪದವಿ ಕಾಲೇಜು, ಹೈಸ್ಕೂಲ್ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಸ್ಥಾಪಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬವಣೆ ಅರಿತು ಅನುದಾನ ನೀಡಿ ಶಿಕ್ಷಣ ಪೂರೈಸಲು ಶ್ರಮಿಸಿರುವೆ ಎಂದರು.
ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಕಲ್ಪಿಸಲು ಪಟ್ಟಣದ 100 ಹಾಸಿಗೆಗಳ ಆಸ್ಪತ್ರೆಯನ್ನು 150 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆರು ಉಪ ಕೇಂದ್ರಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಿದ್ದು, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅವಶ್ಯ ಸೌಲಭ್ಯಗಳನ್ನು ಒದಗಿಸಿರುವೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಮುಖ್ಯ ಶಿಕ್ಷಕರಾದ ಹನುಮಂತಪ್ಪ, ಸುಲೋಚನಾ, ಎಸ್ಡಿಎಂಸಿ ಅಧ್ಯಕ್ಷ ಪ್ರಕಾಶ್ ಇತರರಿದ್ದರು.