ಜಿಲ್ಲೆ

ಸಮಾಜದ ಬದಲಾವಣೆಗೆ ವಕೀಲರು ಮಹತ್ವದ ಪಾತ್ರ ವಹಿಸಬೇಕು: ಶಶಿಕಿರಣ್ ಶೆಟ್ಟಿ

ಮಡಿಕೇರಿ: ಜನರು ಮತ್ತು ನ್ಯಾಯಾಲಯಗಳ ಮಧ್ಯೆ ಸೌಹಾರ್ಧದ ಸೇತುವೆಗಳಂತೆ ಕಾರ್ಯನಿರ್ವಹಿಸುವ ಮಹತ್ವದ ಹೊಣೆಗಾರಿಕೆ ಹೊಂದಿರುವ ವಕೀಲರು ಸಮಾಜದಲ್ಲಿ ಗುರುತರ ಬದಲಾವಣೆ ತರುವಲ್ಲಿಯೂ ಪ್ರಮುಖ ಪಾತ್ರ ವಹಿಸಬೇಕೆಂದು ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಹೇಳಿದರು.


ನಗರದ ಹೊರವಲಯದಲ್ಲಿನ ಕ್ಯಾಪಿಟಲ್ ವಿಲೇಜ್ ರೆಸಾರ್ಟ್‌ನಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಭಾನುವಾರ ಆಯೋಜಿತವಾದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವೃತ್ತಿಗಳಿಗೆ ಹೋಲಿಸಿದರೆ ವಕೀಲ ವೃತ್ತಿಯು ಅತ್ಯಂತ ಘನತೆ, ಗೌರವ ಹೊಂದಿರುವ ಮಹತ್ವದ ವೃತ್ತಿಯಾಗಿದೆ. ವಕೀಲ ವೃತ್ತಿಯಲ್ಲಿ ಇರುವವರು ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಿಂದಲೂ ಸಾಮಾಜಿಕ ವಿಚಾರಗಳಲ್ಲಿನ ಹೋರಾಟಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಈಗಲೂ ಕೂಡ ವಕೀಲರು ಸಾಮಾಜಿಕವಾಗಿ ಬದಲಾವಣೆ ತರುವಂಥ ಹೋರಾಟಗಳಲ್ಲಿ ಕಾನೂನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.


ಭಾರತದಲ್ಲಿ ಕಾನೂನು ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭವಾಗುತ್ತಿರುವುದು ಕೂಡ ವಕೀಲ ವೃತ್ತಿಯನ್ನು ಅತೀ ಹೆಚ್ಚು ಯುವಕ, ಯುವತಿಯರು ಆಯ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ನಿದರ್ಶನದಂತಿದೆ. ವಕೀಲ ವೃತ್ತಿಯ ಪ್ರಾಮುಖ್ಯತೆ ಹೆಚ್ಚಳವಾಗುತ್ತಿರುವುದನ್ನು ಇದು ಸಾಬೀತು ಪಡಿಸುತ್ತಿದೆ ಎಂದ ಅವರು, ಯಾವುದೇ ವೃತ್ತಿಯಾಗಿರಲಿ ಮನಸ್ಸಿನಲ್ಲಿ ಸಂತೋಷದಿಂದ ಅಂಥ ವೃತ್ತಿಯನ್ನು ನಿರ್ವಹಿಸಬೇಕು. ಆಗ ಯಶಸ್ಸು ಖಂಡಿತಾ ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.


ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್.ವಿಶಾಲ ರಘು ಮಾತನಾಡಿ, ಮಡಿಕೇರಿ ವಕೀಲರ ಸಂಘದ ಕೋರಿಕೆ ಮೇರೆಗೆ ಮಡಿಕೇರಿಯಲ್ಲಿ ೫ ದಿನಗಳ ಕಾಲ ವಕೀಲರಿಗಾಗಿ ವೃತ್ತಿಪರ ಕಾರ್ಯಾಗಾರ ಆಯೋಜಿಸಲು ೧ ಲಕ್ಷ ರೂ. ಅನುದಾನವನ್ನು ವಕೀಲರ ಪರಿಷತ್‌ನಿಂದ ನೀಡಲಾಗುವುದು. ಪ್ರಸ್ತುತ ಕರ್ನಾಟಕದಲ್ಲಿ ೧.೧೫ ಲಕ್ಷ ವಕೀಲರು ಕಾರ್ಯಪ್ರವತ್ತರಾಗಿದ್ದು, ಪೈಕಿ ೨೭,೭೫೦ ಮಹಿಳಾ ವಕೀಲರಿದ್ದಾರೆ. ಪ್ರತೀ ವರ್ಷ ರಾಜ್ಯದಲ್ಲಿ ೭.೫೦೦ ವಕೀಲರು ನೂತನವಾಗಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.


ಕೊಡಗು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಚ್.ಸಿ.ಶ್ಯಾಮ್ ಪ್ರಸಾದ್ ಮಾತನಾಡಿ, ಯಾವುದೇ ವಕೀಲರು ರಸ್ತೆಗಿಳಿದು ಕಕ್ಷಿದಾರರನ್ನು ಹುಡುಕುವಂಥ ಸ್ಥಿತಿ ನಿರ್ಮಾಣವಾಗಬಾರದು. ನ್ಯಾಯದ ಅಗತ್ಯತೆ ಉಳ್ಳವರು ಘನವೆತ್ತ ನ್ಯಾಯಾಲಯಗಳಿಗೆ ಬಂದು ವಕೀಲರ ನೆರವು ಪಡೆಯಬೇಕು. ವಕೀಲರು ಕಕ್ಷಿದಾರರೊಂದಿಗೆ ಪ್ರಾಮಾಣಿಕತೆಯಿಂದ ವ್ಯವಹರಿಸುವಂತೆ ಸಲಹೆ ನೀಡಿದ ಅವರು, ವಕೀಲರು ತನ್ನ ವೃತ್ತಿಗೌರವ ಮತ್ತು ವತ್ತಿ ಧರ್ಮವನ್ನು ಪ್ರಾಮಾಣಿಕ ರೀತಿಯಲ್ಲಿ ಪಾಲಿಸುವಂತೆ ಹೇಳಿದರು.


ಹಿರಿಯ ವಕೀಲ ಮಡಿಕೇರಿಯ ಕೊಕ್ಕೆಂಗಡ ಸೌಭಾಗ್ಯ ಪೊನ್ನಪ್ಪರವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್, ಕೊಡಗು ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಾಧೀಶೆ ಜಿ.ಪ್ರಶಾಂತಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಜಯಲಕ್ಷ್ಮಿ, ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ್, ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್, ಮಡಿಕೇರಿ ನಗರಸಭೆಯ ಅಧ್ಯಕ್ಷೆ ಅನಿತಾಪೂವಯ್ಯ, ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.