ಜಿಲ್ಲೆ

ಸಮಾಜದ ಪ್ರತಿ ವ್ಯಕ್ತಿಗೆ ವೈದ್ಯಕೀಯ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು :  ಹಿಮ್ಸ್ ನಿರ್ದೇಶಕ ಡಾ ರವಿಕುಮಾರ

ಹಾಸನ:  ಪ್ರಸ್ತುತ ಕಾಲಘಟ್ಟದಲ್ಲಿ ಸಾಮಾನ್ಯ ಜನರು ವೈದ್ಯ ಲೋಕ ಕುರಿತು ಸಾಮಾನ್ಯ ಜ್ಞಾನ ತಿಳಿದುಕೊಳ್ಳುವುದು ಅವಶ್ಯಕವಾಗಿದ್ದು, ಎಲ್ಲರಿಗೂ ಇಂತಹ ವಸ್ತು ಪ್ರದರ್ಶನವು ಉಪಯುಕ್ತವಾಗಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.

ನಗರದ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ‘ವೈದ್ಯಕೀಯ ವಸ್ತು ಪ್ರದರ್ಶನ, ಕ್ಲಿನಿಲಾಜಿಕ್-3.0’ಅನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು, ವೈದ್ಯರು, ವೈದ್ಯಕೀಯದ ಬಗ್ಗೆ ತಿಳಿಯಲು ಈ ರೀತಿಯ ವಸ್ತು ಪ್ರದರ್ಶನ ಸಹಕಾರಿಯಾಗಲಿದೆ. ವೈದ್ಯಕೀಯ ವ್ಯವಸ್ಥೆ ಬಗ್ಗೆ ಸಾಮಾನ್ಯ ಜ್ಞಾನ ತಿಳಿಯಲು ಇದು ಉತ್ತಮ ವೇದಿಕೆ. ಸಾರ್ವಜನಿಕವಾಗಿ ರೋಗಿಗಳೊಂದಿಗೆ ವೈದ್ಯರು ಯಾವ ರೀತಿ ನಡೆದುಕೊಳ್ಳಬೇಕು ಮತ್ತು ಮಾಹಿತಿ ಹೇಗೆ ತಿಳಿಸಬೇಕು ಎಂಬುದನ್ನು ಈ ವಸ್ತು ಪ್ರದರ್ಶನದಲ್ಲಿ ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದು ಕಿವಿಮಾತು ಹೇಳಿದರು.

ಕೋವಿಡ್ ಮಹಾಮಾರಿ ಆವರಿಸಿದ ಕಾರಣ ಕಳೆದ ಮೂರು ವರ್ಷಗಳ ಕಾಲ ವೈದ್ಯಕೀಯ ವಸ್ತು ಪ್ರದರ್ಶನ ಏರ್ಪಡಿಸಲು ಸಾಧ್ಯವಾಗಿರಲಿಲ್ಲ. ಇಂತಹ ಉಪಯುಕ್ತ ಕಾರ್ಯಕ್ರಮವು ಹೆಚ್ಚೆಚ್ಚು ನಡೆಯಬೇಕು ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿಮ್ಸ್ ನಿರ್ದೇಶಕರಾದ ಡಾ.ಬಿ.ಸಿ. ರವಿಕುಮಾರ್, ಕೇವಲ ವೈದ್ಯರನ್ನು ತಯಾರಿಸುವುದಷ್ಟೇ ವೈದ್ಯಕೀಯ ಕಾಲೇಜುಗಳ ಕರ್ತವ್ಯವಲ್ಲ. ಬದಲಿಗೆ ಸಮಾಜದ ಪ್ರತಿ ವ್ಯಕ್ತಿಗೆ ವೈದ್ಯಕೀಯ ವಿಚಾರಗಳ ಬಗ್ಗೆ ಅರಿವು ಮೂಡಿಸಿ ತಮ್ಮಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅನುವು ಮಾಡಿಕೊಡುವುದು ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ವೈದ್ಯಕೀಯ ವಸ್ತು ಪ್ರದರ್ಶನದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಕೋರಿದರು.

ಮುಖ್ಯ ಅತಿಥಿಗಳಾದ ಹಾಗೂ ಎಸ್.ಡಿ.ಎಂ. ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಪ್ರಸನ್ನ ನರಸಿಂಹ ರಾವ್ ಮಾತನಾಡಿ, ಹಿಮ್ಸ್ ಸಂಸ್ಥೆಯು ದೇಶದಾದ್ಯಂತ ಹೆಸರುವಾಸಿಯಾಗಿದೆ. ಇದಕ್ಕೆ ಪೂರಕವೆಂಬಂತೆ ಇಂದು ವೈದ್ಯಕೀಯ ವಸ್ತು ಪ್ರದರ್ಶನವನ್ನು ಆಯೋಜಿಸುವ ಮುಖಾಂತರ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವುದಲ್ಲದೆ ಸಮಾಜದಲ್ಲಿ ತಮ್ಮ ಸೇವೆಯನ್ನು ಉತ್ತಮಗೊಳಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಹಾಸನ ಶಾಖೆ ಸಭಾಪತಿಗಳಾದ ಎಚ್.ಪಿ. ಮೋಹನ್ ಮಾತನಾಡಿ, ಹಿಮ್ಸ್ ಸಂಸ್ಥೆಯು ಸರ್ಕಾರದ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿರುವುದಲ್ಲದೆ ಸಮಾಜಮುಖಿ ಕೆಲಸಗಳಿಗೆ ಮಾದರಿಯಾಗಿದೆ ಎಂದರು.

ವಿವಿಧ ವಿದ್ಯಾಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳ ಜ್ಞಾನವನ್ನು ವಿಕಸನಗೊಳಿಸಲು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಹಿಮ್ಸ್ ಸಂಸ್ಥೆಯ ಮೂಲಕ ಮೂರನೇ ಬಾರಿ ಇಂತಹ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ‘ಅಂಗೈನಲ್ಲಿ ಆರೋಗ್ಯ’ ಎಂಬ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಿಎಚ್‌ಒ ಡಾ.ಬಿ.ಎನ್. ಶಿವಸ್ವಾಮಿ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಅಬ್ದುಲ್ ಬಶೀರ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ, ಅನನ್ಯ ಟ್ರಸ್ಟ್ ಸಂಸ್ಥಾಪಕರಾದ ಕೆ.ಟಿ. ಜಯಶ್ರೀ ಎಸ್.ಡಿ.ಎಂ ಆಯುರ್ವೇದ ಕಾಲೇಜು ಉಪಪ್ರಾಂಶುಪಾಲರಾದ ಡಾ. ಯು. ಶೈಲಜಾ, ವೈದ್ಯಕೀಯ ಅಧೀಕ್ಷಕ ಡಾ.ವಿ.ಆರ್.ಕೃಷ್ಣಮೂರ್ತಿ, ಮುಖ್ಯ ಆಡಳಿತಾಧಿಕಾರಿ ರೇಖಾ ಹಾಗೂ ವೈದ್ಯಕೀಯ ವಸ್ತು ಪ್ರದರ್ಶನ ಸಮಿತಿ ಅಧ್ಯಕ್ಷರಾದ ಡಾ.ಗಿರೀಶ್. ಕೆ.ಎಲ್. ಬಾಬು ಇತರರು ಉಪಸ್ಥಿತರಿದ್ದರು.