ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಾಜದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಬೇಕು. ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯೋಣ ಎಂದು ವಿಧಾನಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಆಶಯ ವ್ಯಕ್ತಪಡಿಸಿದರು.
ನಗರದ ಲಿಂಗಾಯತ ಭವನದಲ್ಲಿ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಧಾರವಾಡ ತಾಲೂಕು ಘಟಕ ವತಿಯಿಂದ ಭಾನುವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ, ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ, ಲಿಂಗಧಾರಣೆ, ಸಹಜ ಶಿವಯೋಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಕ್ಷೇತ್ರದಲ್ಲೂ ಸಮಾಜದ ಜನರು ಮುಂಚೂಣಿಯಲ್ಲಿದ್ದಾರೆ. ಸಮಾಜದ ಕುಟುಂಬಗಳ ಸ್ಥಿತಿಗತಿ ಬಗ್ಗೆ ಸಮೀಕ್ಷೆ ಆಗುವ ಕೆಲಸವಾಗಬೇಕಿದೆ. ಯಾವ ಪರಿಸ್ಥಿತಿಯಲ್ಲಿ ಕುಟುಂಬಗಳಿವೆ ಎನ್ನುವುದರ ಮೇಲೆ ಸಹಾಯ ಮಾಡಿ ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು. ಈ ಉತ್ತಮ ಕೆಲಸವನ್ನು ಮಸ್ಕಿಯಲ್ಲಿ ಈಗಾಗಲೇ ಸಮಾಜದವರು ಮಾಡುತ್ತಿದ್ದಾರೆ. ಇದು ರಾಜ್ಯಾದ್ಯಂತ ನಡೆಯುವಂತಾಗಬೇಕು ಎಂದರು.
ಇದಕ್ಕೂ ಪೂರ್ವದಲ್ಲಿ ಬಸವಂತಪ್ಪ ತೋಟದ ಮತ್ತು ಶಿವಣ್ಣ ಶರಣ್ಣವರ ಲಿಂಗಧಾರಣೆ, ಸಹಜ ಶಿವಯೋಗ ನಡೆಸಿಕೊಟ್ಟರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ತಾಲೂಕು ಘಟಕದ ಅಧ್ಯಕ್ಷ ಅರುಣಕುಮಾರ ಶೀಲವಂತ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಶರಣಪ್ಪ ಮತ್ತಿಕಟ್ಟಿ, ಡಾ. ಲಿಂಗರಾಜ ಅಂಗಡಿ, ಡಾ. ವೀರಣ್ಣ ರಾಜೂರ, ಮಲ್ಲಿಕಾರ್ಜುನ ಸಾವಕಾರ, ಶೇಖರ ಕವಳಿ, ವಿ.ಸಿ. ಸವಡಿ, ಡಾ. ಸುಧೀರ ಜಂಬಗಿ, ವೀರಣ್ಣ ಮಳಗಿ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ರವಿ ಕಪಲಿ, ಸಂತೋಷ ಪಟ್ಟಣಶೆಟ್ಟಿ, ಸಂಜಯ ತುರಮರಿ, ಮಹೇಶ ಬಿಳೆಹಾಳ, ಮೃತ್ಯುಂಜಯ ಕರಡಿಗುಡ್ಡ, ಶಿವಕುಮಾರ ಗಾಂಜಿ, ಅಶೋಕ ಕೌಜಗೇರಿ, ಶರಣಬಸಪ್ಪ ಸವಡಿ, ಇತರರು ಇದ್ದರು.
ಮಹಾಂತೇಶ ಗುಂಜೆಟ್ಟಿ ಸ್ವಾಗತಿಸಿದರು. ಬಸವರಾಜೇಶ್ವರಿ ಕೆಂಗಲ ನಿರೂಪಿಸಿದರು. ಶಿವಕುಮಾರ ಕುಂಬಾರಿ ವಂದಿಸಿದರು.