ಜಿಲ್ಲೆ

ಸಮಾಜದ ಏಳಿಗೆಗೆ ದುಡಿದವರನ್ನು ಸ್ಮರಿಸಿ, ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಜಗನ್ನಾಥ್ ಕಿವಿಮಾತು

ನೆಲಮಂಗಲ: ಸಮುದಾಯದ ಪ್ರತಿಭಾವಂತರು ಹಾಗೂ ಸಮಾಜದ ಏಳಿಗಾಗಿ ದುಡಿದ ಮಹನೀಯರನ್ನು ಸ್ಮರಿಸುವ ಜತೆಗೆ ಸಮಾಜಕ್ಕೆ ಪರಿಚಯಿಸಬೇಕು ಎಂದು ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಎನ್.ಎಸ್. ಜಗನ್ನಾಥ ಕಿವಿಮಾತು ಹೇಳಿದರು.

ನಗರದ ಕೆರೆಬಾಗಿಲು ಶ್ರೀರಾಮ ಮಂದಿರದಲ್ಲಿ ತಾಲೂಕು ಬ್ರಾಹ್ಮಣ ಸಭಾ ಮತ್ತು ಶ್ರೀ ಮಾತಾ ವಿಪ್ರ ಮಹಿಳಾ ಮಂಡಳಿ ಭಾನುವಾರ ಆಯೋಜಿಸಿದ್ದ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಪ್ರ ಸಮುದಾಯ ಸಮಾಜ ಶೈಕ್ಷಣಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಮುಂದೆ ಬರಬೇಕು ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ. ಮಕ್ಕಳಲ್ಲಿರುವ ಬುದ್ಧಿಮಟ್ಟ, ಜ್ಞಾಪಕಶಕ್ತಿಯಿಂದಾಗಿ ಹೆಚ್ಚಿನ ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಎಂದರು.

ಬ್ರಾಹ್ಮಣ ಸಭಾದ ಜತೆಗೆ ಸಮುದಾಯದ ಮುಖಂಡರು ಸಮಾಜದ ಸಂಘಟನೆಗೆ ಮುಂದಾಗಿರುವುದು ಪ್ರಶಂಸನೀಯ. ಮುಂದಿನ ದಿನಗಳಲ್ಲಿ ಸಹಸ್ರ ಸಂಖ್ಯೆಯ ಮಕ್ಕಳನ್ನು ಗೌರವಿಸುವಂತೆ ಆಗಬೇಕು ಎಂದು ಹೇಳಿದರು.

ದೇಶದಲ್ಲಿ ಮೀಸಲಾತಿ, ಒಳಮೀಸಲಾತಿ ಎಂದು ಕೆಲ ಸಮುದಾಯಗಳು ಹೋರಾಟ ಮಾಡುತ್ತಿವೆ. ವಿಪ್ರ ಸಮುದಾಯ ಅರ್ಥಿಕವಾಗಿ ಸಾಕಷ್ಟು ಹಿಂದುಳಿದ ಸಮುದಾಯವಾಗಿದೆ. ಈ ಸಮುದಾಯದಲ್ಲಿ ಪ್ರತಿಭಾವಂತ ಮಕ್ಕಳಿದ್ದು ಮೀಸಲಾತಿಯಿಂದ ಉನ್ನತ ವಿದ್ಯಾಭ್ಯಾಸಕ್ಕೆ ಪ್ರವೇಶ ಸಿಗದೆ ಶೈಕ್ಷಣಿಕವಾಗಿ ಹಿಂದುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶ್ರೀ ಮಾತಾ ವಿಪ್ರ ಮಹಿಳಾ ಮಂಡಳಿ ಅಧ್ಯಕ್ಷೆ ಉಮಾ ಮಾತನಾಡಿ, ಸಮುದಾಯದ ಅದ್ಭುತ ಇತಿಹಾಸ ಇಂದಿನ ಮಕ್ಕಳಿಗೆ ತಿಳಿಸಿಕೊಡುವ ಅನಿವಾರ್ಯತೆ ಇದೆ. ಇದಕ್ಕಾಗಿ ಕಾರ್ಯಕ್ರಮ ರೂಪಿಸಬೇಕಿದೆ. ಮಕ್ಕಳು ಹೃದಯವಂತಿಕೆಯನ್ನೂ ಬೆಳೆಸಿಕೊಳ್ಳಬೇಕಿದೆ. ಭಾರತದ ಅತ್ಯಂತ ಪ್ರಾಚೀನ ನಾಗರಿಕತೆಯ ಬೇರುಗಳು ಸಮುದಾಯದಲ್ಲಿ ಇರುವುದು ಹೆಮ್ಮೆಯ ಸಂಗತಿ ಎಂದರು.

ಎಸ್‌ಎಸ್‌ಎಲ್‌ಸಿ, ಪದವಿಪೂರ್ವ, ಪದವಿ ಹಾಗೂ ಸ್ನಾತಕೋತರ ಪದವಿಯಲ್ಲಿ ಅತಿಹೆಚ್ಚು ಅಂಕಪಡೆದು 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತಾಲೂಕು ಬ್ರಾಹ್ಮಣ ಸಭಾದ ಉಪಾಧ್ಯಕ್ಷ ವಿ. ರಾಘವೇಂದ್ರಶಾಸ್ತ್ರಿ, ಕಾರ್ಯದರ್ಶಿ ಬಿ.ಕೆ. ನಟರಾಜು, ನಿರ್ದೇಶಕರಾದ ಕೆ. ರಾಜಣ್ಣ, ಎನ್.ಜಿ. ನಾಗಭೂಷಣ್, ಎನ್.ಎಸ್. ವೆಂಕಟರಾವ್, ಗುಂಡೂರಾವ್, ಗುರುನಾಥ್, ಎಚ್.ಎಸ್. ಮಾರುತಿ, ರಾಮಕೃಷ್ಣಮೂರ್ತಿ, ಎಚ್. ನಾಗರಾಜು, ವಾಗ್ದೇವಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ. ಹರೀಶ್, ಕೆರೆಬಾಗಿಲು ಶ್ರೀರಾಮ ಮಂದಿರ ಅಧ್ಯಕ್ಷ ಎಸ್. ನಾಗಭೂಷಣ್ ಮತ್ತಿತರರು ಇದ್ದರು.