ಜಿಲ್ಲೆ

ಸಮಾಜದ ಅಭಿವೃದ್ಧಿಯಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಅಪಾರ

ಚಾಮರಾಜನಗರ: ಪ್ರಸ್ತುತ ಸಮಾಜದ ಅಭಿವೃದ್ಧಿಯಲ್ಲಿ ಹಾಗೂ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಅಪಾರವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮೈಸೂರು ವಿಭಾಗೀಯ ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳ 5 ವರ್ಷಗಳ ಕಾರ್ಯತಂತ್ರ, ನೀತಿ-ನಿರೂಪಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಮಯ, ಶ್ರಮ ಮತ್ತು ಸಂಪನ್ಮೂಲಗಳನ್ನು, ಯಾವುದೇ ಲಾಭವಿಲ್ಲದೇ ಒದಗಿಸುವ ಸ್ವಯಂ ಸೇವಾ ಸಂಸ್ಥೆಗಳು ಸಮಾಜದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ತನ್ನದೇಯಾದ ಛಾಪುಮೂಡಿಸಿದೆ. ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಮತ್ತು ರಾಮನಗರ ಜಿಲ್ಲೆಗಳ ಹಲವಾರು ಸಂಸ್ಥೆಗಳು ಒಗ್ಗೂಡಿ ಸುಮಾರು 5 ವರ್ಷಗಳ ಕಾರ್ಯತಂತ್ರ ರೂಪಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಮಹಿಳೆಯರ ಆರ್ಥಿಕ ಸಬಲೀಕರಣ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಬೆಂಬಲಿಸುವುದು, ಸಾಂಸ್ಕೃತಿಕ ಕ್ಷೇತ್ರವನ್ನು ಉನ್ನತೀಕರಿಸುವುದು ಹಾಗೂ ಇನ್ನಿತರೆ ಅಭಿವೃದ್ಧಿ ಕೆಲಸಗಳನ್ನು ಸ್ವಯಂ ಸೇವಾ ಸಂಸ್ಥೆಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ಈ ಮೂಲಕ ಸಂಸ್ಥೆಗಳು ಸಾರ್ವಜನಿಕರಿಗೆ ಹಾಗೂ ನಿರ್ಗತಿಕರಿಗೆ ಮತ್ತಷ್ಟು ಸಹಕಾರಿಯಾಗಲಿ ಎಂದು ಹೇಳಿದರು.

ಒಕ್ಕೂಟದ ನಿಕಟಪೂರ್ವ ರಾಜ್ಯಾಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, ದೇಶದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಸುಮಾರು 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಜಯಪ್ರಕಾಶ್ ನಾರಾಯಣ್ ಅವರ ಸಲಹೆಯ ಮೇರೆಗೆ ಪ್ರಾರಂಭವಾದ ಒಕ್ಕೂಟ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಸ್ವಯಂ ಸೇವಾ ಸಂಸ್ಥೆಗಳ ತರಬೇತಿಗೆ ಹಲವಾರು ಕಾರ್ಯಕ್ರಮಗಳನ್ನು ಒಕ್ಕೂಟ ಹಮ್ಮಿಕೊಂಡು ಬಂದಿದೆ ಎಂದು ತಿಳಿಸಿದರು.

ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಹಿತ.ಜಿ ಸುವರ್ಣ ಮಾತನಾಡಿ, ಸರ್ಕಾರಿ ಯೋಜನೆಗಳು ತಳಮಟ್ಟದಲ್ಲಿರುವ ಜನರಿಗೂ ತಲುಪಿಸಲು ಸ್ವಯಂ ಸೇವಾ ಸಂಸ್ಥೆಗಳು ಸಹಕಾರಿಯಾಗಿದೆ. ಐದು ವರ್ಷಗಳ ಕಾರ್ಯಕ್ರಮಗಳ ಕುರಿತು ಚಿಂತನೆ ನಡೆಸುತ್ತಿರುವುದು ಅತ್ಯುತ್ತಮ ನಡೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಶ್ ಚಂದ್ರಗುರು, ಮೈಸೂರು ವಿಭಾಗೀಯ ಉಪಾಧ್ಯಕ್ಷೆ ಎ.ಎಸ್.ಪ್ರೇಮಾ, ನಿರ್ದೇಶಕ ವಿ.ಎನ್.ಮೂರ್ತಿ, ಜಿಲ್ಲಾಧ್ಯಕ್ಷ ಕೆ.ಎನ್.ಮಂಟೇಲಿಂಗಯ್ಯ, ಉಪಾಧ್ಯಕ್ಷ ಕದಂಬ ನಾ.ಅಂಬರೀಷ್, ಡಾ.ಪಿ.ಪ್ರೇಮಾ, ಸುಶೀಲಾ ರಾಮಸಮುದ್ರ, ಗಂಗಾಧರಸ್ವಾಮಿ, ರಮೇಶ್ ಪ್ರಭು, ಡಿ.ಎಸ್.ತಿವಾರಿ, ಶಾಂತರಾಜು, ನಾಗರಾಜು ಹಾಗೂ ಇತರರು ಹಾಜರಿದ್ದರು.