ಚಾಮರಾಜನಗರ: ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸರ್ವರ ಸಹಕಾರವೂ ಅಗತ್ಯವಾಗಿದೆ ಎಂದು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ನಗರದ ಸತ್ತಿ ರಸ್ತೆಯಲ್ಲಿರುವ ಶ್ರೀಶಿವಕುಮಾರಸ್ವಾಮಿ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಶನಿವಾರ ಆಯೋಜಿಸಿದ್ದ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಸಮಾಜದ ಸಾಧಕರನ್ನು ಸನ್ಮಾನಿಸಿರುವುದು ಉತ್ತಮ ಕಾರ್ಯಕ್ಕೆ ಸಾಕ್ಷಿಯಾಗಿದೆ. ಯಾರು ಸಂಘಟಿತರಾಗಿ ಕೆಲಸ ಮಾಡುತ್ತಾರೆಯೋ ಅಲ್ಲಿ ಯಶಸ್ಸನ್ನು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಜನರು ಇನ್ನೂ ಹೆಚ್ಚು ಸಂಘಟಿತರಾಗಬೇಕು ಎಂದರು. ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣ ಮಾಡುತ್ತಿರುವ ಬಸವ ಭವನದ ಕಾಮಗಾರಿ ಆದಷ್ಟು ಬೇಗ ಪೂರ್ಣವಾಗಬೇಕಿದೆ. ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಸಹಕಾರ ನೀಡಿದರೆ ಎಲ್ಲವೂ ಸಾಕಾರಗೊಳ್ಳಲಿದೆ ಎಂದು ತಿಳಿಸಿದರು.
ಶ್ರೀಮಹದೇಶ್ವರಬೆಟ್ಟ ಸಾಲೂರು ಮಠದ ಪೀಠಾಧ್ಯಕ್ಷ ಡಾ.ಶಾಂತಮಲ್ಲಿಕಾರ್ಜುನಸ್ವಾಮಿ ಮಾತನಾಡಿ,
ಜಿಲ್ಲೆಯ ಮಹಾಸಭಾದ ಕೆಲಸ, ಕಾರ್ಯಗಳು ಸುತ್ತೂರು ಶ್ರೀಗಳ ಆಶೀರ್ವಾದದಿಂದ ಸುಗಮವಾಗಿ ನಡೆಯುತ್ತಿದೆ. ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಎಲ್ಲಾ ಪದಾಧಿಕಾರಿಗಳು ಅಚ್ಚುಕಟ್ಟಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹರವೆ ವಿರಕ್ತ ಮಠದ ಶ್ರೀಸರ್ಪಭೂಷಣ ಸ್ವಾಮೀಜಿ, ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀಚನ್ನಬಸವ ಸ್ವಾಮೀಜಿ, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಮಾಜಿ ಶಾಸಕರಾದ ಪರಿಮಳಾ ನಾಗಪ್ಪ, ಕೆ.ಆರ್.ಮಲ್ಲಿಕಾರ್ಜುನಪ್ಪ, ಕಾಡಾ ಅಧ್ಯಕ್ಷ ಮರಿಸ್ವಾಮಿ, ನಗರಸಭಾ ಅಧ್ಯಕ್ಷ ಸುರೇಶ್, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಚುಡಾ ಅಧ್ಯಕ್ಷ ಮೊಹಮ್ಮದ್ ಅಸ್ಗರ್ ಮುನ್ನಾ, ಮಹಾಸಭಾ ಕೇಂದ್ರ ಸಮಿತಿ ಸದಸ್ಯ ಎನ್‌ರಿಚ್ ಮಹದೇವಸ್ವಾಮಿ, ರಾಷ್ಟ್ರೀಯ ಸಮಿತಿ ಸದಸ್ಯೆ ರೂಪ ರಾಜಶೇಖರ್, ರಾಜ್ಯ ಸಮಿತಿ ಸದಸ್ಯ ಸುಜೇಂದ್ರ, ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಪ್ರಧಾನ ಕಾರ್ಯದರ್ಶಿ ಎಂ.ಮಂಜೇಶ್, ಕೋಶಾಧ್ಯಕ್ಷ ಗುರುಸ್ವಾಮಿ, ತಾಲೂಕು ಅಧ್ಯಕ್ಷರಾದ ಬಿ.ಬಾಲಚಂದ್ರುಮೂರ್ತಿ, ಪುಟ್ಟಣ್ಣ, ರವಿ, ಮಹದೇವಪ್ಪ, ಸೋಮಶೇಖರ್ ಹಾಗೂ ಇತರರು ಹಾಜರಿದ್ದರು.
ಸಮಾಜಕ್ಕೆ ಶೇ.1 ರಷ್ಟು ಹಣವನ್ನು ನೀಡಿ:
ಜಿಲ್ಲೆಯಲ್ಲಿರುವ ಸಮಾಜದ ಜನರು ಶೇ.1 ರಷ್ಟು ಹಣವನ್ನು ನೀಡಿದರೆ, ಬಸವ ಭವನ ಕಾಮಗಾರಿಯನ್ನು ಮುಗಿಸಿ, ಮುಂದಿನ ಬಸವ ಜಯಂತಿ ವರೆಗೆ ಭವನವನ್ನು ಉದ್ಘಾಟನೆ ಮಾಡಬಹುದಾಗಿದೆ ಎಂದು ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಮಹಾದೇವ ಬಿದರಿ ಹೇಳಿದರು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮುದಾಯದ ಜನರು ಇದ್ದು, ಸಮುದಾಯ ಭವನ ನಿರ್ಮಾಣವಾದರೇ ಸಾಕಷ್ಟು ಅನುಕೂಲವಾಗಲಿದೆ. ನಾನು ನಿಮ್ಮೊಂದಿಗೆ ಜೋಳಿಗೆ ಹಿಡಿದು ಬರಲು ಸಿದ್ಧನಾಗಿದ್ದೇನೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹಕಾರವನ್ನು ನೀಡಬೇಕು. 1998 ರಲ್ಲಿ ಎಸ್.ಆರ್.ಬೊಮ್ಮಯಿ ನಂತರ ನಮ್ಮ ಸಮಾಜದ ಯಾರು ಕೇಂದ್ರ ಸಚಿವರಾಗಿಲ್ಲ, ಬಿ.ಡಿ.ಜತ್ತಿ ಅವರ ನಂತರ ಯಾರು ರಾಜ್ಯಪಾಲರಾಗಿಲ್ಲ, ಇತ್ತೀಚೆಗೆ ಯಾರು ಕೂಡ ಉನ್ನತ ಸ್ಥಾನಗಳಿಗೆ ಹೋಗುತ್ತಿಲ್ಲ. ಆಗಾಗಿ ಸಮಾಜದವರು ಅಂತರಂಗದಲ್ಲಿ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಪ್ರಪಂಚದಲ್ಲಿ 3 ಕೋಟಿ ಇರುವ ಸಿಖ್ಖರು, 1.30 ಕೋಟಿ ಇರುವ ಯಹೂದಿಗಳು, 1 ಕೋಟಿ ಇರುವ ಜೈನರು ಇಡೀ ಜಗತ್ತನ್ನು ಆಳುತ್ತಿದ್ದಾರೆ. ಆದರೆ ವೀರಶೈವ ಲಿಂಗಾಯತ ಧರ್ಮದವರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಒಡಕಿನಿಂದ ಹಿಂದುಳಿಯುತ್ತಿದ್ದೇವೆ. ಮುಂದಿನ ಪೀಳಿಗೆ ಸದೃಢವಾಗಿರಲು ನಾವೆಲ್ಲರೂ ಬಹುದೊಡ್ಡ ತ್ಯಾಗಕ್ಕೆ ಸಿದ್ಧರಾಗಬೇಕು. ಸಾಮಾಜಿಕ ಪ್ರಜ್ಞೆ, ಕಳಕಳಿ ಮತ್ತು ಜವಾಬ್ದಾರಿಯಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಸಾಧಕರಿಗೆ ಸನ್ಮಾನ:
ಡಾಕ್ಟರೇಟ್ ಪದವಿ ಪುರಸ್ಕೃತ ಡಾ.ಶಾಂತಮಲ್ಲಿಕಾರ್ಜುನಸ್ವಾಮೀಜಿ, ಅಂತರಾಷ್ಟ್ರೀಯ ಖೋಖೋ ಪಟು ಕು.ಚೈತ್ರಾ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಸ್ವಾಮಿ ಪೊನ್ನಾಚಿ, ಜಿಲ್ಲಾ ಮಟ್ಟದ ಭರತ ನಾಟ್ಯ ವಿಜೇತರಾದ ಶಿಕ್ಷಕಿ ಅನಿತಾ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದ ಎಂ.ಪಿ.ರಾಜಣ್ಣ, ಡಾ.ಕೆ.ವಿ.ಯೋಗೇಶ್, ಕೆ.ಜಿ.ಶಶಿಕಲಾ, ಸಾಹಿತಿ ಪ್ರಕಾಶ್ ಪುಟ್ಟಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಲೂರಿನ ಅಕ್ಕಮಹಾದೇವಿ ಮಹಿಳಾ ಭಜನಾ ತಂಡದವರು ನಡೆಸಿಕೊಟ್ಟ ವಚನ ಗಾಯನ ಗಮನಸೆಳೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವ ಭವನ ಕಾಮಗಾರಿ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದುವರಿದ ಕಾಮಗಾರಿಗೆ ಹೆಚ್ಚಿನ ಅನುದಾನವನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ. ಅದೇ ರೀತಿಯಲ್ಲಿ ಸಮಾಜದ ಜನರು ಕೂಡ ಕೈಜೋಡಿಸಬೇಕು.
-ಎಚ್.ಎಂ.ಗಣೇಶ್‌ಪ್ರಸಾದ್, ಶಾಸಕ, ಗುಂಡ್ಲುಪೇಟೆ
ಜಿಲ್ಲೆಯ ಬಸವ ಭವನ ಪರಿಪೂರ್ಣ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧತೆಯನ್ನು ಇಟ್ಟುಕೊಂಡಿದೆ. ನಮ್ಮ ಶಕ್ತಿಮೀರಿ ಇದರ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ಬಸವ ಭವನಗಳ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ನೀಡಿದ್ದೇನೆ.
-ಎ.ಆರ್.ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ