ಸೇಡಂ: ನನ್ನ ಹೋರಾಟದ ಜೀವನದಿಂದಲೂ ವೀರಶೈವ ಸಮಾಜ ನನ್ನನ್ನು ಕೈಹಿಡಿದು ನಡೆಸಿದೆ. ಹೀಗಾಗಿ ಸಮಾಜಕ್ಕಾಗಿ ನಾನು ಸದಾ ಶ್ರಮಿಸುತ್ತೇನೆ, ಸಮುದಾಯ ಅಭಿವೃದ್ಧಿಗೂ ಬದ್ಧನಾಗಿರುವುದಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಭರವಸೆ ನೀಡಿದರು.
ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಶೈಕ್ಷಣಿಕ ಹಾಗೂ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ನಿಂದ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ವೀರಶೈವ ಲಿಂಗಾಯತರು ಆರ್ಥಿಕ , ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಅವರ ಉನ್ನತಿಗಾಗಿ ನಿಗಮ ಮಂಡಳಿ ಸ್ಥಾಪಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ. ಅವರಿಗೂ ಸಮಾಜದ ಬಗ್ಗೆ ಅಪಾರ ಗೌರವ, ಅಭಿಮಾನವಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಹಾಲಪ್ಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರಿ ಸ್ವಾಮಿಜೀ, ವೀರಶೈವ ಶೈಕ್ಷಣಿಕ ಹಾಗೂ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ಮಾತನಾಡಿದರು.
ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಕೊತ್ತಲ ಬಸವೇಶ್ವರ ಸಂಸ್ಥಾನದ ಶ್ರೀ ಸದಾಶಿವ ಸ್ವಾಮೀಜಿ, ಪ್ರಮುಖರಾದ ಸಿದ್ದಪ್ಪ ತಳ್ಳಳ್ಳಿ, ಶರಣಬಸಪ್ಪ ಹಾಗರಗಿ, ನಾಗಯ್ಯಸ್ವಾಮಿ ಬೊಮ್ನಳ್ಳಿ, ಬಸವರಾಜ ರೇವಗೊಂಡ, ನಾಗೇಂದ್ರಪ್ಪ ಸಿಲಾರಕೋಟ, ಓಂಪ್ರಕಾಶ ಪಾಟೀಲ್ ತರನಳ್ಳಿ, ಶಿವಕುಮಾರ ಬೊಳಶೆಟ್ಟಿ, ಶಂಕ್ರಪ್ಪ ಮಾಸ್ಟರ್ ಕೋಸಗಿ, ಶಿವಶರಣಪ್ಪ ಪಂತಲು, ನಾಗೇಂದ್ರಪ್ಪ ಡೊಳ್ಳಾ, ಸಂಗಮೇಶ ಇಂಜಳ್ಳಿ, ವೀರಭದ್ರಯ್ಯಸ್ವಾಮಿ ಮೀನಹಾಬಾಳ, ಮಂಜುಳಾ ಎಕಮಾಯಿ, ಮಲ್ಲಮ್ಮ ಪತ್ರಿ ಇತರರಿದ್ದರು. ಭವಾನಿ ಪ್ರಾರ್ಥಿಸಿದರು. ಮಹಾನಂದ ಸಾಹು ಸ್ವಾಗತಿಸಿದರು. ಪ್ರದೀಪ ಪಾಟೀಲ್ ಹೊಸಳ್ಳಿ ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ ಭೂತಪುರ ವಂದಿಸಿದರು.
ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ದು, ಪ್ರಗತಿಯಲ್ಲಿರುವ ಸಮಾಜದ ಕಲ್ಯಾಣ ಮಂಟಪಕ್ಕೆ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ. 2021ನೇ ಸಾಲಿನ ಮೊದಲ ಹಂತದಲ್ಲಿಯೇ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು. ಸಮಾಜ ಮತ್ತು ತಾಲೂಕಿನ ಜನತೆ ಸದಾ ನನ್ನೊಂದಿಗಿದ್ದು, ಶಾಸಕನಾಗಿ ಆಯ್ಕೆಮಾಡಿದ್ದಾರೆ. ನಿಮ್ಮ ಋಣ ತೀರಿಸಲಾಗದು.
| ರಾಜಕುಮಾರ ಪಾಟೀಲ್ ತೆಲ್ಕೂರ, ಶಾಸಕ ಹಾಗೂ ಎನ್ಇಕೆಆರ್ಟಿಸಿ ಅಧ್ಯಕ್ಷ