ಜಿಲ್ಲೆ

ಸಮಾಜದ ಅಂಕು ಡೊಂಕು ತಿದ್ದಿದ ತಾತಯ್ಯ

ಹನೂರು: ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರ ಕೊಡುಗೆ ಅಪಾರ ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಶ್ರೀ ಯೋಗಿ ನಾರೇಯಣ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೈವಾರ ತಾತಯ್ಯ ಎಂದೇ ಪ್ರಸಿದ್ಧ ಪಡೆದಿರುವ ಶ್ರೀ ಯೋಗಿ ನಾರೇಯಣ ಅವರು ಕೀರ್ತನೆಗಳು ಹಾಗೂ ತತ್ವಪದಗಳ ಮೂಲಕ ಮನೆ ಮಾತಾಗಿದ್ದರು. ಸಾವಿರಾರು ಕೀರ್ತನೆಗಳನ್ನು ರಚಿಸಿ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ವಚನ ಸಾಹಿತ್ಯವನ್ನು ಪಸರಿಸಿದರು. ಹಾಗಾಗಿ ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ನೆಲೆಸಿರಬೇಕಾದರೆ ಕೈವಾರ ತಾತಯ್ಯ ಅವರು ನಾಡಿಗೆ ಸ್ಫೂರ್ತಿಯಾಗಿದ್ದಾರೆ. ಉತ್ತಮ ಸಮಾಜಕ್ಕೆ ದಾರಿದೀಪವಾಗಿದೆ. ಇವರ ಆದರ್ಶ ಅನುಕರಣಿಯವಾಗಿದೆ. ಈ ದೆಸೆಯಲ್ಲಿ ಸರ್ಕಾರದ ವತಿಯಿಂದ ಜಯಂತಿಯನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಕ್ಷತೆಯಿಂದ ಕಾರ್ಯನಿರ್ವಹಿಸುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಕ ಮಹಾದೇವ, ಆರ್‌ಐ ಶೇಷಣ್ಣ, ಗ್ರಾಮ ಆಡಳಿತಾಧಿಕಾರಿ ಕಾವ್ಯಾ, ಪಪಂ ಸದಸ್ಯ ಪವಿತ್ರಾ, ಬಲಿಜ ಅಭಿವೃದ್ಧಿ ಸಂಘದ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಜಯರಾಮ್, ಕಾರ್ಯದರ್ಶಿ ರಂಗಶೆಟ್ಟಿ, ಮುಖಂಡರಾದ ಸೆಲ್ವರಾಜು, ನಾಗೇಶ್, ನಟರಾಜು ಹಾಗೂ ಇನ್ನಿತರರು ಇದ್ದರು.