ಹಾಸನ: ಈ ಭೂಮಿ ಮೇಲೆ ಎಷ್ಟು ದಿನ ಬದುಕಿದ್ದೇವೆ ಎನ್ನುವುದಕ್ಕಿಂತ ಜೀವಿಸಿದ ಅವಧಿಯಲ್ಲಿ ಸಮಾಜಕ್ಕೆ ಏನು ಸೇವೆ ಸಲ್ಲಿಸಿದ್ದೇವೆ ಎನ್ನುವುದು ಪ್ರಮುಖವಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ವಕೀಲ ದೇವರಾಜೇಗೌಡ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ನೀಡಿದರು.
ನಗರದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜು ಸಭಾಂಗಣದಲ್ಲಿ ಮಾನವ ಹಕ್ಕುಗಳ ಒಕ್ಕೂಟ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಘಟಕ ಮತ್ತು ರೆಡ್ ರಿಬ್ಬನ್ ಮತ್ತು ಜೀವ ಸಂಜೀವಿನಿ ರಕ್ತ ಕೇಂದ್ರ ಇವರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಹಾಗೂ ಅನ್ನದಾನ ದಾನದಾನಕ್ಕಿಂತ ಶ್ರೇಷ್ಠ ದಾನ ಎಂದು ಕರೆಯುತ್ತಾರೆ. ನಾವು ಮಾಡುವ ದಾನ ಇಲ್ಲ ಸೇವೆಯೇ ನಾವು ಸಮಾಜಕ್ಕೆ ಕೊಡುವ ಕೊಡುಗೆಯಾಗಿದೆ ಎಂದರು.
ಅಪಘಾತದ ಮತ್ತು ಇತರೆ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚು ಇರುವುದರಿಂದ ರಕ್ತದಾನದ ಅವಶ್ಯಕತೆ ಬಹಳ ಇದೆ. ಆರೋಗ್ಯವಂತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕನಿಷ್ಠ ನಾಲ್ಕರಿಂದ ಆರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು. ಹಳೆ ರಕ್ತ ಹೋಗಿ ಹೊಸ ರಕ್ತ ಉತ್ಪತ್ತಿ ಆಗಲಿದ್ದು, ರಕ್ತದಾನ ಮಾಡಿದವರ ಆರೋಗ್ಯವೂ ವೃದ್ಧಿಯಾಗಲಿದೆ. ನಾವು ಇಂದು ಕೊಟ್ಟಂತಹ ರಕ್ತ ಮತ್ತೊಬ್ಬರ ಪ್ರಾಣ ಉಳಿಸುತ್ತದೆ. ತಪ್ಪು ಕಲ್ಪನೆಯಿಂದ ಎಷ್ಟೋ ಜನರು ರಕ್ತದಾನ ಮಾಡಲು ಹಿಂದೇಟು ಹಾಕುತ್ತಾರೆ. ಬಿಪಿ, ಶುಗರ್ ಇಲ್ಲದಿದ್ದರೂ ಭಯದಿಂದ ರಕ್ತ ಕೊಡಲು ಹಿಂಜರಿಯುತ್ತಿದ್ದಾರೆ. ರಕ್ತ ಕೊಡುವುದರಿಂದ ಯಾವುದೇ ರೀತಿಯ ಅನಾಹುತ ಆಗುವುದಿಲ್ಲ. ಹೆಣ್ಣಾಗಲಿ ಗಂಡಾಗಲಿ ರಕ್ತದಾನ ಮಾಡಿದರೆ ಇನ್ನೊಬ್ಬರ ಪ್ರಾಣ ಉಳಿಸಿದ ಪುಣ್ಯ ನಿಮ್ಮದಾಗುತ್ತದೆ ಎಂದು ಹೇಳಿದರು.
ಮಹಾಲಕ್ಷ್ಮಿ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಬಿಪಿ, ಶುಗರ್ ಪರೀಕ್ಷೆ ಮಾಡಲಾಯಿತು. ನೂರಾರು ಜನ ವಿದ್ಯಾರ್ಥಿನಿಯರು ರಕ್ತದಾನದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಡಾ. ಸೀ.ಚ. ಯತೀಶ್ವರ್, ಎಂಎಂಎಂ ಆಸ್ಪತ್ರೆ ನಿರ್ದೇಶಕ ಡಾ. ಎಂ. ಉಮೇಶ್, ಮಾನವ ಹಕ್ಕುಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಯಲಗುಂದ ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ಜಿ. ಕುಮಾರ್, ಕಾಲೇಜು ಐಕ್ಯೂಎಸಿ ಸಂಯೋಜಕರಾದ ಎಸ್.ಎಚ್. ವಾರೀಜ, ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಎನ್.ಎಸ್. ಶಶಿಕಲಾ, ಎನ್‌ಎಸ್‌ಎಸ್ ಯೋಜನಾಧಿಕಾರಿ ಪಿ. ಮಂಜುಳಾ, ಎಚ್.ಎನ್. ಶೈಲಜಾ, ಫಾತಿಮಾ ಬೇಗಂ, ರುಷ್ಮಾ ಭಾನು, ಟಿ.ಆರ್. ಶುಭಾ, ಪೂರ್ವಿಕಾ ಇತರರು ಉಪಸ್ಥಿತರಿದ್ದರು.