ಜೇವರ್ಗಿ: ಶಕಾಪುರ (ಎಸ್‌ಎ)ದ ಶ್ರೀ ಸಿದ್ಧರಾಮ ಶಿವಾಚಾರ್ಯರು ಅನ್ನ ಮತ್ತು ಜ್ಞಾನ ದಾಸೋಹ ಮೂಲಕ ಈ ಭಾಗದ ಬಡ ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಬಣ್ಣಿಸಿದರು.
ಶ್ರೀ ಸಿದ್ಧರಾಮ ಶಿವಯೋಗಿಗಳ 74ನೇ ಪುಣ್ಯಾರಾಧನೆ ನಿಮಿತ್ತ ಶಕಾಪುರ ವಿಶ್ವಾರಾಧ್ಯರ ತಪೋವನ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ದಾಸೋಹ ಸೇವೆ ಮುಂದುವರಿಸಿರುವ ಪೀಠಾಧಿಪತಿ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರ ಸಮಾಜಮುಖಿ ಸೇವೆ ಶ್ಲಾಘನೀಯ ಎಂದರು.
ಡಾ.ಸಿದ್ಧರಾಮ ಶಿವಾಚಾರ್ಯರು ಧರ್ಮ ಕಾರ್ಯ ಜತೆಗೆ ಜ್ಞಾನದ ದೀವಿಗೆ ಹೊತ್ತಿಸಿ ನಿರಂತರ ಅನ್ನ ದಾಸೋಹ ಮಾಡುತ್ತಿದ್ದಾರೆ. ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದ ಶ್ರೀಗಳು ಬಡ ಅನಾಥ ಮಕ್ಕಳಿಗೆ ವಸತಿ, ಊಟದ ವ್ಯವಸ್ಥೆ ಕಲ್ಪಿಸಿ ಮಹೋನ್ನತ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಕೊಂಡಾಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯ ಆಶೀರ್ವಚನ ನೀಡಿ, ಲಿಂ. ಶ್ರೀಸಿದ್ಧರಾಮ ಶಿವಯೋಗಿಗಳು ಜೀವನದುದ್ದಕ್ಕೂ ಧರ್ಮ ಪ್ರಚಾರ ಹಾಗೂ ದಾಸೋಹ ಸೇವೆ ಸಲ್ಲಿಸಿದ್ದಾರೆ. ಸಮಾಜಕ್ಕೆ ಅವರ ಕೊಡುಗೆ ಅಪಾರ ಎಂದರು.
ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯ, ವೆಂಕಟಬೇನೂರಿನ ಶ್ರೀ ಸಿದ್ಧರೇಣುಕ ಶಿವಾಚಾರ್ಯ, ಕುಳೇಕುಮಟಗಿಯ ಶ್ರೀ ಗುರುಸ್ವಾಮಿ ಶರಣರು ನೇತೃತ್ವದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ, ಪ್ರಮುಖರಾದ ರಾಜಶೇಖರ ಸೀರಿ, ರೇವಣಸಿದ್ದಪ್ಪ ಸಂಕಾಲಿ, ಕಾಶೀರಾಯಗೌಡ ಯಲಗೋಡ, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಡಾ.ಪಿ.ಎಂ. ಮಠ, ಅಂಬರೇಶ ಶಖಾಪುರ, ಚಂದ್ರಶೇಖರ ತುಂಬಗಿ ಇತರರಿದ್ದರು.
ಸಾವಿರಾರು ಭಕ್ತರು ರೊಟ್ಟಿ, ಭಜ್ಜಿ ಪಲ್ಲೆ ಪ್ರಸಾದ ಸ್ವೀಕರಿಸಿದರು. ಬೆಳಗ್ಗೆ 6ಕ್ಕೆ ಲಿಂ. ಶ್ರೀ ಸಿದ್ಧರಾಮ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ ಹಾಗೂ ರುದ್ರಾಭಿಷೇಕ ನೆರವೇರಿತು. ಸಂಜೆ 5ಕ್ಕೆ ತಪೋವನ ಮಠ ಆವರಣದಲ್ಲಿ ಪಲ್ಲಕ್ಕಿ ಉತ್ಸವ, ರಾತ್ರಿ 10ರಿಂದ ಬೆಳಗ್ಗಿನ ಜಾವದವರೆಗೆ ಕಲಾವಿದರಿಂದ ಸಂಗೀತ ಹಾಗೂ ಭಜನೆ ಜರುಗಿತು.