ಜಿಲ್ಲೆ

ಸಮಾಜಕ್ಕೆ ರಾಜೇಂದ್ರ ಶ್ರೀಗಳ ಕೊಡುಗೆ ಅಪಾರ

ಚಾಮರಾಜನಗರ: ಜೆಎಸ್‌ಎಸ್ ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ್ದು, ಸಮಾಜದ ಉನ್ನತಿಗೆ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಕೊಡುಗೆ ಅಪಾರವಾಗಿದೆ ಎಂದು ಜೆಎಸ್‌ಎಸ್ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಬಿ.ಶಿವಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಆಲೂರು ಗ್ರಾಮದ ಬಸವ ಭವನದಲ್ಲಿ ಜೆಎಸ್‌ಎಸ್ ಸಂಸ್ಥೆಯ ನೌಕರರ ವರ್ಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಸುತ್ತೂರಿನ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ. ಶಿಕ್ಷಣವೇ ಧರ್ಮ, ಶಿಕ್ಷಣವೇ ಆಚಾರ, ಶಿಕ್ಷಣವೇ ಸಮಾಜದ ಸುಧಾರಣೆಯ ಬಹುಮುಖ್ಯ ಮಾರ್ಗ ಎಂಬುದನ್ನು ಅಕ್ಷರಶಃ ಅರಿತು ಆಚರಿಸಿದರು. ಪ್ರಸ್ತುತ ಸಂದರ್ಭದಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ದೇಶವಲ್ಲದೇ, ದೇಶದಲ್ಲೂ ಸಾಕಷ್ಟು ಹೆಸರು ಮಾಡಿದೆ ಎಂದು ತಿಳಿಸಿದರು.

ಚಾಮರಾಜನಗರದಲ್ಲಿ 1983 ರಲ್ಲಿ ಪ್ರಥಮ ಬಾರಿಗೆ ಶಿಕ್ಷಣ ಸಂಸ್ಥೆಯನ್ನು ತೆರೆದು ಎಲ್ಲಾ ಸಮುದಾಯಗಳ ಜನರಿಗೆ ಉನ್ನತ ಮಟ್ಟದ ಶಿಕ್ಷಣ ದೊರೆಯಲು ಶ್ರಮಿಸಿದರು. ಅವರು ಮಾಡಿದ ಶಿಕ್ಷಣ, ಆರೋಗ್ಯ ಮತ್ತು ದಾಸೋಹ ಸೇವೆಗಳಿಂದ ಲಕ್ಷಾಂತರ ಜನರು ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

ರೈತ ಮುಖಂಡ ಮಹೇಶ್ ಪ್ರಭು ಮತ್ತು ಆಲೂರು ಮಲ್ಲು ಅವರು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆಲೂರು ಗ್ರಾಮದ ಎ.ಎಸ್.ಅಭಿಷೇಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಸಂಸ್ಥೆಯ ನೌಕರರ ವರ್ಗದವರು ಹಾಗೂ ಗ್ರಾಮಸ್ಥರು ಹಾಜರಿದ್ದರು.