ನೆಲಮಂಗಲ: ಆಧುನಿಕತೆಯ ಸಮಾಜಕ್ಕೆ ಮಹನೀಯರ ಶ್ರೇಷ್ಠ ಚಿಂತನೆಗಳು, ಮಾಗದರ್ಶನದ ಅವಶ್ಯಕತೆ ಇದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಮೋಹನ್‌ಕುಮಾರ್ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಮಂಗಳವಾರ ತಾಲೂಕು ಆಡಳಿತ ಆಯೋಜಿಸಿದ್ದ ಸೇವಾಲಾಲ್ ಮಹಾರಾಜರ 283ನೇ ಜಯಂತಿಯಲ್ಲಿ ಮಾತನಾಡಿದರು.
ಧರ್ಮಗುರು ಶ್ರೀ ಸೇವಾಲಾಲ್ ಮಹಾರಾಜರ ಬಂಜಾರ ಜನಾಂಗ ಶ್ರಮಜೀವಿಗಳಾಗಿದ್ದು, ಸಮುದಾಯದ ಜನ ಸಂಘಟಿತರಾಗಬೇಕು. ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಿ, ಸರ್ಕಾರದ ಸೌಕರ್ಯ ಬಳಸಿಕೊಳ್ಳಬೇಕು ಎಂದರು.
ನಗರಸಭೆ ಸದಸ್ಯ ಸುನೀಲ್‌ಮೂಡ್ ಮಾತನಾಡಿ, ಬಂಜಾರ ಜನಾಂಗದಲ್ಲಿ ಜನಿಸಿದ್ದ ಧರ್ಮಗುರು ಸೇವಾಲಾಲ್ ಮಹಾರಾಜರು, ಕರ್ನಾಟಕ, ನೆರೆರಾಜ್ಯಗಳಲ್ಲಿಯೂ ಸಂಚರಿಸಿ ಸಮುದಾಯವನ್ನು ಸಂಘಟಿಸಿ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದರು. ಮಾನವತೆಯ ತತ್ವ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.
ಲಂಬಾಣಿ ಭಾಷೆಗೆ ಲಿಪಿ ಇಲ್ಲ. ಕನ್ನಡದಲ್ಲೇ ಬರೆದು ಓದಬೇಕು. ಸಮುದಾಯದಲ್ಲಿ ಹಳೆಯ ಜಾನಪದ ಕಲೆಗಳು ಜೀವಂತವಾಗಿವೆ.ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಜಾತಿಯತೆಯಿಂದಾಗಿ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಮನುಷ್ಯಜಾತಿ ಒಂದೇ ಎಂಬ ಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡು ಎಲ್ಲರೂ ಪರಸ್ಪರ ಸಹಕಾರದಿಂದ ಜನಾಂಗವನ್ನು ಮೇಲೆತ್ತಬೇಕು ಎಂದರು.
ತಾಲೂಕಿನ ಸೋಲದೇವನಹಳ್ಳಿ ಗ್ರಾಪಂನ ಧರ್ಮನಾಯಕನತಾಂಡ್ಯದಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು, ಕುಡಿಯುವ ನೀರಿನ ಸೌಲಭ್ಯ, ರಸ್ತೆ ವ್ಯವಸ್ಥೆ, ಸ್ಮಶಾನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಗ್ರಾಮಸ್ಥರು ವಿಶೇಷ ತಹಸೀಲ್ದಾರ್ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು.
ವಲಯ ಅರಣ್ಯಾಧಿಕಾರಿ ಲಷ್ಕರ್‌ನಾಯ್ಕ, ಬೆಸ್ಕಾಂ ಇಲಾಖೆ ಕಾರ್ಯನಿರ್ವಾಹಕ ಅಭಿಯಂತೆ ಅನುಸೂಯಾಬಾಯಿ, ಸಹಾಯಕ ಅಭಿಯಂತ ಕುಮಾರ್‌ನಾಯ್ಕ, ಕಾರ್ಮಿಕ ನಿರೀಕ್ಷಕ ಧನಪಾಲ್‌ನಾಯಕ್, ಶಿರಸ್ತೇದಾರ್ ಶ್ರೀನಿವಾಸ್‌ಮೂರ್ತಿ, ವಿಮಲಾ, ರಾಜಸ್ವ ನಿರೀಕ್ಷಕ ಅಶ್ವತ್ಥ್, ಸೋಲದೇವನಹಳ್ಳಿ ಗ್ರಾಪಂ ಸದಸ್ಯರಾದ ಮುನಿಕೃಷ್ಣನಾಯಕ್, ಸಂತೋಷ್‌ಕುಮಾರ್‌ನಾಯಕ್, ವಕೀಲ ಶಿವಕುಮಾರ್, ಮಂಜುನಾಥ್, ವೈದ್ಯ ಶಂಕರ್‌ರಾವ್, ರಮೇಶ್‌ರಾಠೋಡ್, ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಬಿ.ನರಸಿಂಹಯ್ಯ, ಅಧ್ಯಕ್ಷ ನವೀನ್ ಮತ್ತಿತರರು ಉಪಸ್ಥಿತರಿದ್ದರು.