ವಿಜಯವಾಣಿ ಸುದ್ದಿಜಾಲ ಧಾರವಾಡ
ಬಂಟ ಸಮಾಜವು ತನ್ನ ವಿಶಿಷ್ಟ ಕಾರ್ಯಚಟುವಟಿಕೆಗಳಿಂದ ಇತರ ಸಮಾಜಗಳಿಗೆ ಪ್ರೇರಣೆ ಮತ್ತು ಆದರ್ಶವಾಗಿದೆ ಎಂದು ಮೇಯರ್ ಈರೇಶ ಅಂಚಟಗೇರಿ ಅಭಿಪ್ರಾಯಪಟ್ಟರು.
ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಹು-ಧಾ ಬಂಟರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಬಂಟರ ಸಮಾಜದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿತ್ಯ ತಮ್ಮ ದುಡಿಮೆ ಮತ್ತು ವ್ಯವಹಾರಗಳ ಒತ್ತಡದ ಮಧ್ಯೆಯೂ ಸಮಾಜದವರು ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸಂತಸದ ಸಂಗತಿ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಉತ್ತಮ ಸಂಘಟಕರು ಎಂಬುದನ್ನು ನಿರೂಪಿಸಿದ್ದಾರೆ. ಸಾಮಾಜಿಕ ಕ್ಷೇತ್ರಕ್ಕೂ ಬಂಟ ಸಮಾಜದವರ ಕೊಡುಗೆ ಅಪಾರವಾಗಿದೆ. ಸಮಾಜದ ಎಲ್ಲರೂ ಸೇರಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಆಟೋಟಗಳ ಮಹತ್ವ ತಿಳಿಸಿಕೊಡುವುದರ ಜತೆಗೆ ಸಂಭ್ರಮಿಸುವ ದಿಸೆಯಲ್ಲಿ ಕ್ರೀಡಾಕೂಟ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದರು.
ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ ಮಾತನಾಡಿ, ಮನುಷ್ಯ ಆರೋಗ್ಯವಂತನಾಗಿರಲು ದೈಹಿಕ ಕ್ಷಮತೆ ಅಗತ್ಯ. ಇದಕ್ಕಾಗಿ ಕ್ರೀಡೆ, ಯೋಗ ಇನ್ನಿತರ ಕಸರತ್ತುಗಳಿಂದ ಆರೋಗ್ಯ ಪಡೆಯಲು ಸಾಧ್ಯ. ಆರೋಗ್ಯವಂತನಾದರೆ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ಬಂಟ ಸಮಾಜ ತಮ್ಮ ಇಡೀ ಪರಿವಾರ ಸಹಿತ ಶಿಸ್ತು ಮತ್ತು ಸಂತಸದಿಂದ ಕ್ರೀಡಾಕೂಟಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ ಎಂದರು.
ಹು-ಧಾ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ಮಹೇಶ ಶೆಟ್ಟಿ, ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ, ಬಿ.ಶಾಂತಾರಾಮ ಶೆಟ್ಟಿ, ಸತೀಶ ಶೆಟ್ಟಿ, ಸುಧೀರ ಶೆಟ್ಟಿ, ರಾಜೇಂದ್ರ ಶೆಟ್ಟಿ, ಉದಯ ಶೆಟ್ಟಿ, ದಿನೇಶ ಅಡ್ಯಂತಾಯ, ಸುರೇಶ ಹೆಗಡೆ, ಕೆ.ರಮಾನಂದ ಶೆಟ್ಟಿ, ಹರ್ಷಕುಮಾರ ಶೆಟ್ಟಿ, ಶಂಕರ ಶೆಟ್ಟಿ, ಹರ್ಷಕುಮಾರ ಶೆಟ್ಟಿ, ರವಿಕಾಂತ ಶೆಟ್ಟಿ, ಅರುಣ ಶೆಟ್ಟಿ, ಕೃಷ್ಣ ಶೆಟ್ಟಿ, ಇತರರು ಇದ್ದರು.
ಪುರಂದರ ರೈ ಸ್ವಾಗತಿಸಿದರು. ವಿಜಯಲಕ್ಷ್ಮೀ ಶೆಟ್ಟಿ ನಿರೂಪಿಸಿದರು. ಪ್ರದೀಪ ಪಕ್ಕಳ ವಂದಿಸಿದರು.