ಚಿತ್ರದುರ್ಗ: ಅಂಕಗಳಿಗೆ ಸೀಮಿತವಾಗದೆ ಸಮಾಜಕ್ಕೆ ಕೊಡುಗೆ ನೀಡುವ ಉತ್ತಮ ಪ್ರಜೆಗಳಾಗಿ ಬೆಳೆಯಬೇಕೆಂದು ವಿದ್ಯಾರ್ಥಿಗಳಿಗೆ ಶ್ರೀ ಶಿವಶರಣ ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಮುರುಘಾಮಠದ ಅನುಭವ ಮಂಟಪದಲ್ಲಿ, ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು,ನಿಮ್ಮ ಈ ಪದವಿ ಹಿಂದೆ ಪಾಲಕರ ಅಪಾರ ಶ್ರಮವಿದೆ. ವಿದ್ಯಾಭ್ಯಾಸ ಮುಂದುವರಿಸಿ ಉನ್ನತ ಸ್ಥಾನ ಪಡೆಯಬೇಕು. ತಂದೆ, ತಾಯಿ, ನಾಡಿನ ಋಣ ತೀರಿಸುವ ನಿಟ್ಟಿನಲ್ಲಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಶರಣರ ಮೌಲ್ಯಗಳನ್ನು ಅಳವಡಿಸಿಕೊಂಡು ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸ ಬೇಕು ಎಂದರು.
ದಾವಣಗೆರೆ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ.ಡಿ.ಪಿ. ನಾಗರಾಜಪ್ಪ, ಪ್ರಾಚಾರ್ಯ ಡಾ.ಪಿ.ಬಿ. ಭರತ್, ಬಿ.ರುದ್ರಮನಿ, ವಿಸಿ ಮೂಲಕ ಶ್ರೀ ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ, ಸದಸ್ಯ ಡಾ.ಪಿ.ಎಸ್. ಶಂಕರ್, ಎಸ್.ಎನ್. ಚಂದ್ರಶೇಖರ್ ಮಾತನಾಡಿದರು.
ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಮಹಾವಿದ್ಯಾಲಯದ ವಿವಿಧ ವಿಭಾಗದ ಮುಖ್ಯಸ್ಥರು, ಗಣ್ಯರು ಇದ್ದರು.
200 ಸ್ನಾತಕ ಹಾಗೂ ಐವರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.