ಜಿಲ್ಲೆ

ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ತತ್ವಪದಕಾರರು

ಸಿಂಧನೂರು: ಸಮಾಜ ತಿದ್ದುವಲ್ಲಿ ತತ್ವಪದಕಾರರ ಪಾತ್ರ ಪ್ರಮುಖವಾಗಿದ್ದು, ತತ್ವಪದಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ಸರಿಪಡಿಸಿದ್ದಾರೆ ಎಂದು ವಕೀಲ ಹಾಗೂ ಕೆಪಿಸಿಸಿಸಿ ಕಾರ್ಯದರ್ಶಿ ನಿರುಪಾದೆಪ್ಪ ಗುಡಿಹಾಳ ಹೇಳಿದರು.

ನಗರದ ಅನಿಕೇತನ ಪದವಿ ಮಹಾವಿದ್ಯಾಲಯದಲ್ಲಿ ಕಸಾಪದಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ, ತತ್ವಪದ, ಸಂಗೀತ, ಅಧ್ಯಾತ್ಮ ಹಾಗೂ ಜಾನಪದ ಗಾಯನ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ತತ್ವಪದಕಾರರು ಭೇದಗಳಿಲ್ಲದೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಶಿಶುನಾಳ ಶರೀಫ, ಅಂಕಲಿಮಠದ ನಿರುಪಾದೆಪ್ಪ ಶಿವಯೋಗಿ, ಮಡಿವಾಳಪ್ಪ, ವಿರುಪನಗೌಡ, ನಾಗಲಿಂಗಪ್ಪ ಅವರು ತತ್ವಪದಗಳನ್ನು ಬರೆದು ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ ಎಂದರು.

ಮನುಜಮತ ಬಳಗ ಅಧ್ಯಕ್ಷ ಡಿ.ಎಚ್.ಕಂಬಳಿ ಮಾತನಾಡಿ, ಕನ್ನಡ ಸಾಹಿತ್ಯದ ಹಿರಿಮೆ ಬಹಳ ದೊಡ್ಡದು. ಕುವೆಂಪು, ಮಾಸ್ತಿ, ದ.ರಾ.ಬೇಂದ್ರೆ, ನಿಸಾರ್ ಅಹ್ಮದ್, ಚನ್ನವೀರ ಕಣವಿ, ಯು.ಆರ್.ಅನಂತಮೂರ್ತಿ ಸೇರಿದಂತೆ ಅನೇಕ ಮಹನೀಯರು ಭಾಷೆ, ನೆಲ, ಜಲಕ್ಕಾಗಿ ದುಡಿದಿದ್ದಾರೆ ಎಂದು ತಿಳಿಸಿದರು.

ತಿಮ್ಮಣ್ಣ ನಾಯಕ ಸಾಗರಕ್ಯಾಂಪ್, ಬಸವರಾಜ ಗೌಡನಬಾವಿ, ಅಮರೇಶ ಕುಂಬಾರ ದಿದ್ದಿಗಿ, ಬಸವರಾಜ ಗಸ್ತಿ, ಸುಷ್ಮಾ ಹಿರೇಮಠ ತತ್ವಪದಗಳನ್ನು ಹಾಡಿದರು. ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಅಧ್ಯಕ್ಷತೆ ವಹಿಸಿದ್ದರು.

ಅನಿಕೇತನ ಕಾಲೇಜಿನ ಪ್ರಾಚಾರ್ಯ ತಿಮ್ಮಣ್ಣ ರಾಮತ್ನಾಳ, ಸೈಯದ್ ಜಾಗೀರ್‌ದಾರ್ ರಬ್ಬಾನಿ, ವೀರನಗೌಡ ಬಾದರ್ಲಿ, ಶೇಖ್ ಬಶೀರ್ ಏತ್ಮರಿ, ಸಬ್ಜಲಿಸಾಬ ಸಿಂಧನೂರು, ಪತ್ರಕರ್ತರಾದ ಶರಣಪ್ಪ ಬೇರ‌್ಗಿ, ದೇವಣ್ಣ ಸಾಹುಕಾರ ಕಾನಿಹಾಳ, ಲಿಂಗರಾಜ ಇದ್ದರು.