ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಸ್ಪರ್ಧೆ ವಿಜೇತರಾದ ಯೂನಿವರ್ಸ್ ಇಂಗ್ಲಿಷ್ ಸ್ಕೂಲ್‌ನ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಜಿ.ನಿಜಗುಣರಾಜು, ಸಿ.ಸುಬ್ರಹ್ಮಣ್ಯಂ, ಬಿ.ವಿ.ವೆಂಕಟನಾಗಪ್ಪಶೆಟ್ಟಿ, ಎನ್.ವಿಜಯಲಕ್ಷ್ಮೀ ಇತರರಿದ್ದರು. 
ಜಿಲ್ಲೆ

ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ

ಚಾಮರಾಜನಗರ: ಮಕ್ಕಳು ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದರೆ ಆಗ ಜನ್ಮ ಸಾರ್ಥಕವಾಗುತ್ತದೆ ಎಂದು ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಅಧ್ಯಕ್ಷ ಜಿ. ನಿಜಗುಣರಾಜು ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶ್ರೀ ಆರ್ಯ ವಿದ್ಯಾಕುಲ ಎಜುಕೇಷನ್ ಟ್ರಸ್ಟ್‌ನ ಯೂನಿವರ್ಸ್ ಇಂಗ್ಲಿಷ್ ಸ್ಕೂಲ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪಾಲಕರು ರ‌್ಯಾಂಕ್‌ಗೆ ಕೊಡುವ ಆದ್ಯತೆಯನ್ನು ಮಕ್ಕಳ ಬೆಳವಣಿಗೆಗೂ ಕೊಡಬೇಕು. ಮಕ್ಕಳಲ್ಲಿ ರಾಷ್ಟ್ರಪ್ರೇಮ ತುಂಬಬೇಕು. ಭಾರತಾಂಬೆ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು. ಭಾರತದ ಮಣ್ಣಿಗೆ ವಿಶೇಷ ಗುಣವಿದೆ. ಅದರ ಅರಿವು ಮಕ್ಕಳಲ್ಲಿ ಮೂಡುವಂತೆ ಗಮನಹರಿಸಬೇಕು ಎಂದರು.

ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಜಿ.ನಿಜಗುಣರಾಜು ಬಹುಮಾನ ವಿತರಿಸಿದರು. ಶ್ರೀ ಆರ್ಯ ವಿದ್ಯಾಕುಲ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಸಿ.ಸುಬ್ರಹ್ಮಣ್ಯಂ, ಬಿಎಸ್‌ವಿ ಪ್ರತಿಷ್ಠಾನದ ಬಿ.ವಿ.ವೆಂಕಟನಾಗಪ್ಪಶೆಟ್ಟಿ, ಯೂನಿವರ್ಸ್ ಇಂಗ್ಲಿಷ್ ಸ್ಕೂಲ್ ಮುಖ್ಯಸ್ಥೆ ಎನ್.ವಿಜಯಲಕ್ಷ್ಮೀ ಇತರರು ಹಾಜರಿದ್ದರು.
ಮಕ್ಕಳಿಂದ ನೃತ್ಯ ವೈಭವ: ಶಾಲೆಯ ಮಕ್ಕಳು ಕನ್ನಡ ಚಲನಚಿತ್ರ ಗೀತೆ ಮತ್ತು ರಾಷ್ಟ್ರಭಕ್ತಿ ಗೀತೆಗಳಿಗೆ ನೃತ್ಯ ಮಾಡಿದ್ದು ಗಮನ ಸೆಳೆಯಿತು.