ಹಾಸನ: ಜಿಲ್ಲೆ ಮತ್ತು ರಾಜ್ಯದಲ್ಲಿ ಕಲೆ, ಸಾಹಿತ್ಯ, ಧಾರ್ಮಿಕವಾಗಿ ಆರ್ಯ ವೈಶ್ಯ ಸಮಾಜದ ಕೊಡುಗೆ ಅಪಾರವಾದದ್ದು ಎಂದು ಸಂಸದ ಶ್ರೇಯಸ್ ಪಟೇಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್ಯವೈಶ್ಯ ಮಹಾಸಭಾ ವತಿಯಿಂದ ನಗರದ ಶುಭೋದಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಾಸನ ಮತ್ತು ಕೊಡಗು ಜಿಲ್ಲೆಯ ಆರ್ಯವೈಶ್ಯ ಕಲಾವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಪಟವಿಲ್ಲದೆ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ವ್ಯಾಪಾರ ವಹಿವಾಟುಗಳನ್ನು ನಡೆಸುವಂತಹ ಸಮಾಜವೆಂದರೆ ಅದು ನಮ್ಮ ಆರ್ಯವೈಶ್ಯ ಸಮಾಜ, ಸಮಾಜದೊಂದಿಗೆ ನಮ್ಮ ಕುಟುಂಬ ನಿಕಟ ಸಂಬಂಧವಿದೆ ಎಂದು ಹೇಳಿದರು.
ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಇಡಿ ಜಿಲ್ಲೆ ಮತ್ತು ರಾಜ್ಯದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನ ಪೂರೈಕೆ ಮಾಡಿದ್ದು, ಇದೇ ನಮ್ಮ ಶೆಟ್ಟರ ಅಂಗಡಿ. ದೊಡ್ಡ ದೊಡ್ಡ ಮಳಿಗೆಗಳು ಮತ್ತು ವ್ಯಾಪಾರಸ್ಥರು ಅಂಗಡಿ ಮುಚ್ಚಿಕೊಂಡು ಹೋಗಿದ್ದರು. ಆದರೆ ಕಷ್ಟದ ಸಂದರ್ಭದಲ್ಲಿಯೂ ಕೂಡ ಜನರಿಗೆ ಅಗತ್ಯ ವಸ್ತುಗಳನ್ನ ಪೂರೈಕೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಆರ್ಯವೈಶ್ಯ ಸಮಾಜ ಅತಿ ಸಣ್ಣ ಸಮಾಜವಾಗಿದ್ದು, ಆದರೆ ಅವರ ಕೊಡುಗೆ ಮಾತ್ರ ಅಪಾರವಾದದ್ದು, ಈ ಸಮಾಜದ ಸಹಕಾರದಿಂದ ನಾನು ಇಂದು ಸಂಸದನಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಮಾಜದ ಯಾವುದೇ ಕೆಲಸ ಕಾರ್ಯಗಳಿದ್ದರೂ ಸಂಸದನಾಗಿ
ಮತ್ತು ವೈಯಕ್ತಿಕವಾಗಿ ನಿಮ್ಮ ಜೊತೆ ಇರುತ್ತೇನೆ ಎಂದು ಭರಸವೆ ನೀಡಿದರು.
ಶಾಸಕ ಎಚ್.ಪಿ. ಸ್ವರೂಪ ಮಾತನಾಡಿ, ಈ ಸಮಾಜದವರು ಎಷ್ಟೇ ಆರ್ಥಿಕವಾಗಿ ಮುಂದುವರೆದಿದ್ದರೂ ಕೂಡ ಸರಳತೆ, ಸಜ್ಜನಿಕೆಯಲ್ಲಿ ಇವರನ್ನು ಮೀರಿಸುವವರು ಯಾರು ಇಲ್ಲ. ನಮ್ಮ ತಂದೆ ನಾಲ್ಕು ಬಾರಿ ಶಾಸಕರಾಗಲು ಹಾಗೂ ನಾನು ಕಳೆದ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈ ಸಮಾಜದ ಪಾತ್ರ ಪ್ರಮುಖವಾದದ್ದು ಎಂದು ಹೇಳಿದರು.
ನಗರದಲ್ಲಿ ಈ ಸಮಾಜದ ಹಲವರು ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದಾರೆ. ಇಂದಿಗೂ ಕೂಡ ಶೆಟ್ರು ಅಂಗಡಿ ಎಂದರೆ ಪ್ರಸಿದ್ಧಿ ಪಡೆದುಕೊಂಡಿದೆ. ಆದರೆ ಇವರು ರಾಜಕೀಯವಾಗಿ ಸಾಕಷ್ಟು ಹಿಂದೆ ಉಳಿದಿದ್ದಾರೆ. ಮುಂದಿನ ದಿನಗಳಲ್ಲಿ ನಗರಸಭೆ, ಜಿಲ್ಲಾ ಪಂಚಾಯಿತಿ,ಶಾಸಕಸ್ಥಾನಗಳಿಗೆ ಇವರು ಸ್ಪರ್ಧೆ ಮಾಡಿ ತಮ್ಮ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ಪ್ರತಿಯೊಂದು ಸಮಾಜದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ರಾಜಕಾರಣ ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜದಲ್ಲಿ ಬೆರಳೆಣಿಕೆಯ ಮಂದಿ ಮಾತ್ರ ರಾಜಕಾರಣದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಹಾಸನ ನಗರಸಭೆಗೆ ಸೇರಿದಂತೆ ಜಿಲ್ಲೆಯಾದ್ಯಂತ ರಾಜಕಾರಣದಲ್ಲಿಯೂ ಕೂಡ ಈ ಸಮಾಜದ ಮುಖಂಡರು ತಮ್ಮ ಸೇವೆಯನ್ನ ಸಲ್ಲಿಸುವಂತಹ ಕೆಲಸವಾಗಲಿ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಕುಮಾರ್, ಜಿಲ್ಲಾ ಅಧ್ಯಕ್ಷ ಪಿ.ಜಿ.ಶ್ರೀಕಾಂತ್, ಮುಖಂಡರಾದ ರಾಜಗೋಪಾಲ್ ಶೆಟ್ಟಿ, ಎ.ಆರ್. ರವಿಕುಮಾರ್, ಬಿ.ಎಸ್. ಅರುಣ್ ಕುಮಾರ್, ರಮೇಶ, ವಿಶ್ವನಾಥ್, ನಾಗೇಂದ್ರ ಪ್ರಸಾದ್, ಸತ್ಯನಾರಾಯಣ್, ಕೆ.ಶ್ರೀಧರ್, ವಾಣಿ ನಾಗೇಂದ್ರ ಸೇರಿದಂತೆ ಇತರರು ಇದ್ದರು