ಬಾಗಲಕೋಟೆ: ಮಕ್ಕಳು ಬೆಳೆಯುವ ಹಂತದಲ್ಲಿಯೇ ಉತ್ತಮ ಆರೋಗ್ಯವಂತರಾಗಿ ಬೆಳೆದಲ್ಲಿ ಮಾತ್ರ ಅವರ ಮುಂದಿನ ಭವಿಷ್ಯ ರೂಪಿಸಲು ಸಾಧ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಅಂಗನವಾಡಿ ಚಟುವಟಿಕೆ ಹಾಗೂ ಕಾನೂನು ಅರಿವು ನೆರವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರು ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವದರಿಂದ ಮಕ್ಕಳ ಮನೋಸ್ಥಿತಿ ಅರಿತಿರುತ್ತಾರೆ. ಮಕ್ಕಳಲ್ಲಿರುವ ಅಪೌಷ್ಠಿಕತೆಯನ್ನು ತಡೆಯಲು ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಗರ್ಭಿಣಿ, ಬಾಣಂತಿಯರ ನಿರ್ವಹಣೆಗೆ ಸಹ ಸೌಲಭ್ಯಗಳಿದ್ದು, ಅವುಗಳನ್ನು ತಲುಪಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರದ್ದಾಗಿದೆ. ಮಗು ಹುಟ್ಟುವ ಪೂರ್ವ ಹಾಗೂ ನಂತರದಲ್ಲಿ ಏನು ಕೊಡಬೇಕು ಎಂಬುದನ್ನು ತಿಳಿಯಬೇಕಿದೆ. ಅಂಗನವಾಡಿಯಲ್ಲಿ ಮಗು ಬೆಳೆದ ಹಂತ ದೊಡ್ಡವರಾದ ಮೇಲೆ ಬರುವುದು ನೆನಪು ಬರುತ್ತದೆ ಎಂದರು.
ಅಂಗನವಾಡಿಯಲ್ಲಿ ಮಗುವಿಗೆ ನೀಡುವ ಆಹಾರ ಚಟವಟಿಕೆಗಳು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸದೃಢರನ್ನಾಗುವಂತೆ ಮಾಡಿದಾಗ ಅವರ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ. ಬಾಲ್ಯವಿವಾಹ ತಡೆಯುವಲ್ಲಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ. ಬಾಲ್ಯವಿವಾಹಕ್ಕೆ ಒಳಗಾದಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಶಿಶುಗಳ ಮೇಲೆ ದೌರ್ಜನ್ಯ ತಡೆಗೆ ಶ್ರಮಿಸಬೇಕು. ಪೋಸ್ಕೋ ಕಾಯ್ದಿಅಡಿ ಪ್ರಕರಣ ದಾಖಲಾದರೆ ಕನಿಷ್ಟ ೨೦ ವರ್ಷ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಇಂತಹ ಅನಿಷ್ಟ ಪದ್ದರಿ ತೊಡೆದು ಹಾಕಿ ಸಮಾಜ ಸುದಾರಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತೊಡಬೇಕು ಎಂದು ಹೇಳಿದರು.
ಜಿ.ಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಶಿಕ್ಷಣ, ವೈದ್ಯಕೀಯ ವ್ಯವಸ್ಥೆ, ಪೌಷ್ಠಿಕತೆಗೆ ಹೆಚ್ಚು ಒತ್ತು ಕೊಟ್ಟು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಮಕ್ಕಳ ಬಳಲುತ್ತಿದ್ದಾರೆ. ಸುಧಾರಣೆಗೆ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸರ್ಕಾರ ನೀಡುವ ಸೌಲಭ್ಯಗಳನ್ನು ನೀಡುವ ಮೂಲಕ ಬದಲಾವಣೆ ತರಬೇಕು. ನಿಮ್ಮ ಜವಾಬ್ದಾರಿಯನ್ನು ಮೇಲಿಂದ ಮೇಲೆ ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಗರ್ಭಿಣಿ, ಬಾಣಂತಿಯರಿಗೆ ಕಾಲ ಕಾಲಕ್ಕೆ ವೈದ್ಯಕೀಯ ಚಿಕಿತ್ಸೆ, ಪರೀಕ್ಷೆ ಆಗುತ್ತಿಲ್ಲ. ಹೆರಿಗೆ ಸಮಯದಲ್ಲಿ ತಾಯಿ, ಮಗುವಿನ ಮರಣ ಹೆಚ್ಚಿಗೆ ಆಗುತ್ತಿವೆ. ಶೇ.೧೫ ರಿಂದ ೨೦ ರಷ್ಟು ೬ ತಿಂಗಳಿಂದ ನೀಡಲಾಗುವ ವಿವಿಧ ತರಹದ ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಕ್ರಮವಹಿಸಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಗೌರವಕ್ಕೆ ಪಾತ್ರವಾಗಬೇಕು ಇಲ್ಲದಾದಲ್ಲಿ ನಿಮ್ಮ ಮೇಲೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಮಗುವಿನ ಬೆಳವಣಿಗಾಗಿ ಅಗತ್ಯ ಕ್ರಮವಹಿಸುವ ಮೂಲಕ ಸಮಾಜಕ್ಕೆ ಆರೋಗ್ಯವಂತ ಮಗು ಕೊಡಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಮನೋವಿಜ್ಞಾನ ತಜ್ಞ ಪಶುಪತಿ ಜಿಗಜಿನ್ನಿ ಮಕ್ಕಳ ಮನೋಸ್ಥಿತಿಯ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಸ್ತಗಿರಿಸಾಬ ಮುಲ್ಲಾ ಸೇರಿದಂತೆ ಇತರು ಉಪಸ್ಥಿತರಿದ್ದರು.