ಜಿಲ್ಲೆ

ಸಮಾಜಕ್ಕೆ ಅನ್ನ ನೀಡುವ ಕೃಷಿಕರನ್ನು ಗೌರವಿಸಬೇಕು: ಡಾ. ವಿಜಯ್ ಅಂಗಡಿ

ಹಾಸನ: ಸಮಾಜಕ್ಕೆ ಅನ್ನ ನೀಡುವ ಕೃಷಿಕನ ಕಸುಬು ಶ್ರೇಷ್ಠವಾದುದು. ಪ್ರತಿಯೊಬ್ಬರು ಕೃಷಿಕರ, ಕೃಷಿಯ ನಂಟನ್ನು ಹೊಂದಬೇಕು. ಆಹಾರ ಆರೋಗ್ಯ, ಆನಂದ ನೀಡುವ ಕೃಷಿಕರನ್ನು ಗೌರವಿಸಬೇಕು ಎಂದು ಹಾಸನ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ. ವಿಜಯ್ ಅಂಗಡಿ ಅವರು ಹೇಳಿದರು.

ನಗರದ ಬಿಎಂ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರವು ಈ ಹಿಂದೆಯೂ ಈಗಲೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ರೈತರಲ್ಲಿ ಕೀಳರಿಮೆ ಇರಬಾರದು ಮತ್ತು ಸ್ವಾಭಿಮಾನ ಇಟ್ಟುಕೊಂಡು ಬದುಕಬೇಕು ಎಂದು ಸಲಹೆ ನೀಡಿದರು.

ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಶಾಖಾ ಮುಖ್ಯಸ್ಥ ಆರ್.ಕೆ. ದಯಾನಂದ್ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ, ನಿರ್ಗತಿಕರಿಗೆ ಅನ್ನದಾನ, ಇನ್ನೂ ಮುಂತಾದ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಬೇಲೂರು ತಾಲೂಕು ಹೂಲಬಗೆರೆ ಗ್ರಾಮದ ಎಚ್.ಆರ್. ಜಗದೀಶ್, ಚೀಲನಾಯಕನಹಳ್ಳಿ ಗ್ರಾಮದ ಮಮತಾ ಚಂದ್ರಶೇಖರ, ಆಲೂರು ತಾಲೂಕಿನ ಯಡೂರು ಗ್ರಾಮದ ವೈ.ಎಸ್.ಕಾಂತರಾಜು, ಅರಸೀಕೆರೆ ತಾಲೂಕಿನ ಅಗ್ಗುಂದ ಗ್ರಾಮದ ಎ.ಎಂ. ಕಿರಣ್ ಡೈರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆಕಾಶವಾಣಿಯ ಕೃಷಿರಂಗ ವಿಭಾಗದ ಅರಕಲಗೂಡು ಮಧುಸೂದನ್, ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, ಡೈಮಂಡ್ ಅಕಾಡೆಮಿ ಪ್ರಾಂಶುಪಾಲ ಹೇಮಂತ್ ಕುಮಾರ್ ಉಪಸ್ಥಿತರಿದ್ದರು.