ಚಿತ್ರದುರ್ಗ: ಯುವಸಮೂಹ ಅತ್ಯುತ್ತಮ ಸಾಧನೆಯೊಂದಿಗೆ ಸಮಾಜಕ್ಕೆ ಮಿಡಿಯುವ ಹೃದಯವಂತಿಕೆ ಮೈಗೂಡಿಸಿಕೊಳ್ಳಬೇಕು ಎಂದು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಸಲಹೆ ನೀಡಿದರು.
ವೀರಶೈವ ಸಮಾಜದಿಂದ ನೀಲಕಂಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ, ಸ್ವಾತಕೋತ್ತರ ಪದವಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಪ್ರತಿಭಾನ್ವಿತ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯವಿದೆ. ಹೀಗಾಗಿ ಬಡತನ ಕಾರಣಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಬಾರದು. ಪಾಲಕರ ಶ್ರಮ ಅರಿತು ಸಾಧಕರಾಗಬೇಕು. ಕುಟುಂಬವನ್ನು ಆರ್ಥಿಕ ಸಬಲತೆಯತ್ತ ಕೊಂಡೊಯ್ಯಬೇಕು. ಯಶಸ್ಸಿಗೆ ಕಾರಣರಾದವರನ್ನು ಮರೆಯಬೇಡಿ ಎಂದರು.
ಮುಂಬರುವ ದಿನಗಳಲ್ಲಿ ಜಿಲ್ಲೆಯ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಸನ್ಮಾನಿಸಲು ಸಮಾಜ ತೀರ್ಮಾನಿಸಿದೆ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ ಮಾತನಾಡಿ, ನಮ್ಮ ಪ್ರಗತಿಗೆ ನಾವೇ ಮುಂದಾಗಬೇಕೆ ಹೊರತು ಯಾರೂ ನಮ್ಮನ್ನು ಉದ್ಧಾರ ಮಾಡುವುದಿಲ್ಲ. ಆದರೆ, ವಿದ್ಯಾವಂತರಾದಾಗ ಮಾತ್ರಿ ಇದು ಸಾಧ್ಯವಿದೆ. ಈ ಕುರಿತು ತಾತ್ಸಾರ ಮನೋಭಾವ ಬೇಡ ಎಂದು ಸಲಹೆ ನೀಡಿದರು.
ಮುಖಂಡರಾದ ಪಿ.ವೀರೇಂದ್ರಕುಮಾರ್, ಸಿದ್ಧವ್ವನಹಳ್ಳಿ ಪರಮೇಶ್, ತಿಪ್ಪೇಸ್ವಾಮಿ, ಕೆ.ಎನ್.ವಿಶ್ವನಾಥಯ್ಯ, ಜಯಪ್ಪ, ಮುಖಂಡರಾದ ಜ್ಞಾನಮೂರ್ತಿ, ರುದ್ರೇಶ್, ರೀನಾ, ಮೋಕ್ಷಾ, ಮಲ್ಲಿಕಾರ್ಜುನ್, ಕೆ.ಸಿ.ರುದ್ರೇಶ್, ಉಮೇಶ್ ಪತ್ತರ್, ತಿಪ್ಪೇಸ್ವಾಮಿ ಇತರರಿದ್ದರು.