ಬೆಳಗಾವಿ ಉದ್ಯಮಬಾಗದಲ್ಲಿ ನೂತನವಾಗಿ ನಿರ್ಮಿಸಿರುವ ಜಿತೋ ಗೋಪಾಲ ಜಿನಗೌಡ ವಿದ್ಯಾರ್ಥಿ ವಸತಿ ನಿಲಯ ಮತ್ತು ಜಿತೋ ಬೆಳಗಾವಿ ವಿಭಾಗದ ಕಾರ್ಯಾಲಯ ಕಟ್ಟಡವನ್ನು ಗಣಪತರಾಜ ಚೌಧರಿ ಅವರು ಶನಿವಾರ ಉದ್ಘಾಟಿಸಿದರು. ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಗೋಪಾಲ ಜಿನಗೌಡ ಇತರರಿದ್ದರು. 
ಜಿಲ್ಲೆ

ಸಮಾಜ ಸೇವೆ ಜೀವನದ ಭಾಗವಾಗಲಿ

ಬೆಳಗಾವಿ: ದಾನ, ಧರ್ಮದಲ್ಲಿ ತೊಡಗಿಸಿಕೊಂಡು ಸಮಾಜ ಸೇವೆಗೆ ಮುಂದಾಗಬೇಕು. ಸಮಾಜಸೇವೆ ಜೀವನದ ಒಂದು ಭಾಗವಾಗಬೇಕು ಎಂದು ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಜೇಶನ್ (ಜಿತೋ) ಅಪೆಕ್ಸ್ ಚೇರ್ಮನ್ ಗಣಪತರಾಜ ಚೌಧರಿ ಹೇಳಿದರು.

ಉದ್ಯಮಬಾಗದಲ್ಲಿ ನೂತನವಾಗಿ ನಿರ್ಮಿಸಿರುವ ಜಿತೋ ಗೋಪಾಲ ಜಿನಗೌಡ ವಿದ್ಯಾರ್ಥಿ ವಸತಿ ನಿಲಯ ಮತ್ತು ಜಿತೋ ಬೆಳಗಾವಿ ವಿಭಾಗದ ಕಾರ್ಯಾಲಯ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ, ಜಿತೋ ಸಂಸ್ಥೆಯು ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಳುತ್ತ ಸಮಾಜ ಸೇವೆ ಮುಂದುವರಿಸಿದೆ. ಇದೀಗ ವಿದ್ಯಾರ್ಥಿ ನಿಲಯ ಪ್ರಾರಂಭಿಸಿದೆ. ಇದೇ ಮಾದರಿಯಲ್ಲಿ ಹೊಸ ಯೋಜನೆ ಹಾಕಿಕೊಂಡಲ್ಲಿ ಅವರಿಗೆ ಎಲ್ಲ ರೀತಿ ನೆರವು ನೀಡಲಾಗುವುದು ಎಂದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಜಿತೋ ಸಂಸ್ಥೆಯು ಸಮಾಜ ಸೇವೆಗೆ ಮಾದರಿಯಾದ ಸಂಸ್ಥೆ. ಸಂಸ್ಥೆಯ ಸದಸ್ಯರು ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿರುವುದರಿಂದ ಈ ಸಂಸ್ಥೆಯು ಹೆಮ್ಮರವಾಗಿ ಬೆಳೆದು, ಜೈನ ಸಮಾಜದ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದೆ ಎಂದರು. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ, ಜಿತೋ ವಸತಿ ನಿಲಯದ ದಾತಾರ ಗೋಪಾಲ ಜಿನಗೌಡ, ಜಿತೋ ಕೆಕೆಜಿ ವಲಯದ ಚೇರ್ಮನ್ ನರೇಂದ್ರಸಿಂಗ್ ಸಾಮರ, ಅಪೆಕ್ಸ್ ನಿರ್ದೇಶಕ ಸತೀಶ ಮೆಹ್ತಾ, ಜಿತೋ ಅಪೆಕ್ಸ್ ಅಧ್ಯಕ್ಷ ಅಭಯ ಶ್ರೀಮಲ್, ಫೋಮ್ಯಾಕ್ ಸಂಸ್ಥೆ ನಿರ್ದೇಶಕ ಶಾಂತಿಲಾಲಜಿ ಪೋರವಾಲ, ಸಂತೋಷ ಪೋರವಾಲ, ಸರ್ವೆಶ ಪೋರವಾಲ, ಮನೋಜ ಸಂಚೇತಿ ಇದ್ದರು. ವಸತಿ ನಿಲಯ ನಿರ್ಮಾಣಕ್ಕೆ ದಾನ ಮಾಡಿದ ಗೋಪಾಲ ಜಿನಗೌಡ ಪರಿವಾರದವನ್ನು ಸತ್ಕರಿಸಲಾಯಿತು. ಮನೋಜ ಸಂಚೇತಿ ಪ್ರಾಸ್ತಾವಿಕ ಮಾತನಾಡಿದರು. ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಪುಷ್ಪಕ ಹನಮಣ್ಣವರ ಸ್ವಾಗತಿಸಿದರು. ವಿಕ್ರಮ ಜೈನ ನಿರೂಪಿಸಿದರು.