ಮೈಸೂರು: ಸಂಘಟನೆ ಜತೆಗೆ ಸಮಾಜ ಸೇವೆ ಉದ್ದೇಶದಿಂದ ಸುವರ್ಣ ಕರ್ನಾಟಕ ಕೇರಳ ಸಮಾಜಂ ಸ್ಥಾಪನೆ ಮಾಡಿದ್ದು, ಬಾಂಧವ್ಯ ವೃದ್ಧಿಯೇ ನಮ್ಮ ಧ್ಯೇಯವಾಗಿದೆ ಎಂದು ಸುವರ್ಣ ಕರ್ನಾಟಕ ಕೇರಳ ಸಮಾಜಂ ಜಿಲ್ಲಾಧ್ಯಕ್ಷ ಡಾ.ಮನು ಬಿ. ಮೆನನ್ ಹೇಳಿದರು.
ನಗರದ ಜಗನ್ಮೋಹನ ಅರಮನೆ ಬಳಿ ಭಾನುವಾರ ನೂತನವಾಗಿ ಆರಂಭಿಸಲಾದ ಸಮಾಜಂನ ಕಚೇರಿ ಉದ್ಘಾಟನೆ ಸಮಾಂಭದಲ್ಲಿ ಅವರು ಮಾತನಾಡಿದರು.
ನೆರೆಯ ಕೇರಳ ರಾಜ್ಯದಿಂದ ಬಂದು ಸಾವಿರಾರು ಜನರು ಕರ್ನಾಟಕದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಈಗ ಅವರು ಕನ್ನಡ ನಾಡಿನಲ್ಲಿ ಇಬ್ಬರಾಗಿದ್ದು, ಎರಡು ರಾಜ್ಯಗಳ ಕಲೆ, ಸಂಸ್ಕೃತಿ, ಪರಂಪರೆಯನ್ನು ಅನುಸರಿಸುವ ಮೂಲಕ ಬಾಂಧವ್ಯದಿಂದ ಬದುಕುತ್ತಿದ್ದಾರೆ. ಇಂತವರನ್ನು ಒಂದು ವೇದಿಕೆಗೆ ತರುವ ಕೆಲಸವನ್ನು ಸುವರ್ಣ ಕರ್ನಾಟಕ ಕೇರಳ ಸಮಾಜಂ ಕಳೆದ 10 ವರ್ಷಗಳಿಂದ ಮಾಡಿಕೊಂಡು ಬಂದಿದೆ ಎಂದರು.
ಜನರು ಸಂಘಟಿತರಾಗುವುದಲ್ಲದೆ ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವಾ ಕಾರ್ಯವನ್ನು ಮಾಡಿಕೊಂಡು ಬರಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 50 ಸಾವಿರ ಜನರು ಸದಸ್ಯರಾಗಿದ್ದು, ಇನ್ನಷ್ಟು ಘಟಕಗಳನ್ನು ಆರಂಭಿಸುವ ಮೂಲಕ ವಿಸ್ತರಣೆ ಕಾರ್ಯ ಮಾಡಲಾಗುವುದು. ಕನ್ನಡದ ನೆಲದಲ್ಲಿ ಬದುಕುತ್ತಿರುವ ನಾವು, ಇಲ್ಲಿನ ನೆಲಕ್ಕೆ ಅಳಿಲು ಸೇವೆ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಮಾಜಂನ ಮಾಜಿ ಅಧ್ಯಕ್ಷ ಡಾ.ಅನಿಲ್ ಥಾಮಸ್ ಮಾತನಾಡಿ, ಎರಡು ರಾಜ್ಯಗಳ ಕಲೆ, ಸಂಸ್ಕೃತಿಯನ್ನು ಪರಿಚಯ ಮಾಡುವ ಕೆಲಸವನ್ನು 2011ರಿಂದ ಮಾಡಿಕೊಂಡು ಬರಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಜನರಿಗೆ ಸಹಾಯ ಹಸ್ತ ಮಾಡುವ ಜತೆಗೆ ನೊಂದವರಿಗೆ ನೆರವು ನೀಡಲಾಗಿದೆ. ಮುಂದೆಯೂ ಸಾಮಾಜಿಕ ಕಾರ್ಯ ಮುಂದುವರಿಸಲಾಗುವುದು ಎಂದರು.
ಸಂಘ ಬೆಳೆಯುತ್ತಿದ್ದು, ಅದಕ್ಕೊಂದು ಕಚೇರಿಯ ಅವಶ್ಯಕತೆ ಇತ್ತು. ಹಾಗಾಗಿ ನಗರದ ಜಗನ್ಮೋಹನ ಅರಮನೆ ಬಳಿ ನೂತನವಾಗಿ ಕಚೇರಿ ಆರಂಭಿಸುವ ಮೂಲಕ ಸದಸ್ಯರು ಬಂದು ಹೋಗಲು ಅವಕಾಶವಾಗುತ್ತಿದೆ. ಕೇವಲ ಕೇರಳಿಗರಿಗೆ ಮಾತ್ರವಲ್ಲದೆ ಕನ್ನಡಿಗರಿಗೂ ಸಾಧ್ಯವಾದ ನೆರವು ನೀಡಲಾಗುವುದು. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿಯೇ ಕೆಲಸ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸುವರ್ಣ ಕರ್ನಾಟಕ ಕೇರಳ ಸಮಾಜಂ ರಾಜ್ಯಾಧ್ಯಕ್ಷ ಕೆ.ಚಂದ್ರಸೇನನ್ ಮಾತನಾಡಿ, ಯಾವುದೇ ಸಮಾಜ ಸಂಘಟಿತರಾದಾಗ ಮಾತ್ರ ಅದಕ್ಕೊಂದು ಶಕ್ತಿ ಬರಲು ಸಾಧ್ಯ. ಹೊರ ರಾಜ್ಯದಿಂದ ಬಂದಿರುವ ನಮಗೆ ಕರ್ನಾಟಕ ಆಶ್ರಯ ನೀಡಿದೆ. ಹಾಗಾಗಿ ಇಲ್ಲಿಯ ಜನರೊಂದಿಗೆ ಹೊಂದಾಣಿಕೆ, ಸಹಬಾಳ್ವೆಯಿಂದ ಮುನ್ನಡೆಯಬೇಕು. ಆರೋಗ್ಯ ಕ್ಷೇತ್ರದಲ್ಲಿ ಕೇರಳ ಹೆಸರು ಮಾಡಿರುವುದರಿಂದ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಎಲ್ಲ ಜಾತಿ, ಧರ್ಮ, ಭಾಷೆಯವರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ನಗರ ಸಂಚಾರ ವಿಭಾಗದ ಎಸಿಪಿ ಎಚ್.ಪರಶುರಾಮಪ್ಪ ಮಾತನಾಡಿ, ದೇಶದಲ್ಲಿ ಒಂದೊಂದು ಭಾಗದಲ್ಲಿಯೂ ಒಂದೊಂದು ಕಲೆ, ಸಂಸ್ಕೃತಿ, ಪರಂಪರೆ ಇದ್ದು, ಎಲ್ಲರೂ ಎಲ್ಲವನ್ನೂ ಗೌರವಿಸಬೇಕು. ಒಂದು ಕಡೆಯಿಂದ ಒಂದು ಕಡೆಗೆ ಬಂದಾಗ ಯಾರೊಂದಿಗೂ ಸಂಘರ್ಷ ಮಾಡಿಕೊಳ್ಳದೆ ಸಾಮರಸ್ಯದಿಂದ ಬದುಕಬೇಕು. ಕೇರಳ ಸಮಾಜಂನಿಂದ ಇನ್ನಷ್ಟು ಸಾಮಾಜಿಕ ಕಾರ್ಯಗಳು ನಿರಂತರವಾಗಿ ಮುಂದುವರಿಯಬೇಕು ಎಂದು ಹೇಳಿದರು.
ಸಮಾಜಂನ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಶಶಿಧರನ್, ಉಪಾಧ್ಯಕ್ಷರಾದ ಕೆ.ಜೆ.ಬೈಜು, ಜಾನ್ ಥೈಲಿ, ಮಾಜಿ ಅಧ್ಯಕ್ಷ ರಾಜನ್ ಜೇಕಬ್, ಜಿಲ್ಲಾ ಉಪಾಧ್ಯಕರಾದ ಜಾರ್ಜ್‌ಕುಮಾರ್, ಟಿ.ಅನಿರುದ್ಧನ್, ಖಜಾಂಚಿ ಶಿಜ್ಜು ಕೃಷ್ಣನ್ ಇತರರು ಇದ್ದರು.